

ಬಸವನಬಾಗೇವಾಡಿ: ಪೌರಕಾರ್ಮಿಕರ ಸೇವೆಯ ಋಣವನ್ನು ಎಷ್ಟು ಜನ್ಮವೆತ್ತಿದರೂ ತೀರಿಸಲು ಸಾಧ್ಯವಿಲ್ಲ ಎಂದು ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಪೌರಾಡಳಿತ ನಿರ್ದೇಶಣಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪುರಸಭೆ ಕಾರ್ಯಾಲಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ರಕ್ತ ಸಂಬಂಧಿಗಳೇ ಬರದೆ ಇದ್ದಾಗ ಪೌರರಾರ್ಮಿಕರು ಜನರ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಅವರ ಸೇವೆ ಅನನ್ಯವಾಗಿದೆ ಎಂದರು.
ಆರೋಗ್ಯ ಇಲಾಖೆಯ ವಲಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಾಂತ ಮೇಟಿ ಮಾತನಾಡಿ, ಪೌರಕಾರ್ಮಿಕರು ಆರೋಗ್ಯದ ಬಗ್ಗೆ ನಿತ್ಯವೂ ನಿಗಾ ವಹಿಸಬೇಕು ಎಂದರು.
ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ನಿವೃತ್ತ ವ್ಯವಸ್ಥಾಪಕ ಈರಣ್ಣ ಚಿಮ್ಮಲಗಿ ಮಾತನಾಡಿ, ಜನರ ಆರೋಗ್ಯ, ಕುಟುಂಬದ ಆರ್ಥಿಕ ಸುಸ್ಥಿತಿ, ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಹತ್ತಾರು ವಿಮಾ ಯೋಜನೆಗಳನ್ನು ಜಾರಿಮಾಡಿದೆ. ಅದರಲ್ಲಿ ಜನರು ಅಲ್ಪಸ್ವಲ್ಪವಾದರೂ ಹಣ ತೊಡಗಿಸಿದಲ್ಲಿ ನಿವೃತ್ತಿ ಜೀವನ ಹಾಗೂ ಕುಟುಂಬದ ಸದಸ್ಯರ ಬದುಕಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಡಾ.ಅಮರೇಶ ಮಿಣಜಗಿ, ವಕೀಲ ಪಿ.ಪಿ.ರಾಠೋಡ ಮಾತನಾಡಿದರು. ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ರವಿ ಪಟ್ಟಣಶೆಟ್ಟಿ, ಪ್ರವೀಣ ಪವಾರ, ಅಶೋಕ ಸಂಪನ್ನವರ (ಗುಳೆದ), ದೇವೇಂದ್ರ ಚವ್ಹಾಣ, ನೀಲಪ್ಪ ನಾಯಕ, ಮುಖಂಡರಾದ ಶರಣಪ್ಪ ಬೆಲ್ಲದ, ಸಂಜೀವ ಕಲ್ಯಾಣಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಆರೋಗ್ಯ ಹಿರಿಯ ನಿರೀಕ್ಷಕ ವಿಜಯಕುಮಾರ ವಂದಾಲ, ಕಿರಿಯ ನಿರೀಕ್ಷಕ ಮಹೇಶ ಹಿರೇಮಠ ಇತರರಿದ್ದರು. ಮಹೇಶ ಹಿರೇಮಠ ಸ್ವಾಗತಿಸಿದರು. ಸುರೇಶ ಬಾಗೇವಾಡಿ ನಿರೂಪಿಸಿದರು.