ಜಡ್ಕಲ್‌ನಲ್ಲಿ ಲೋ ವೋಲ್ಟೇಜ್ ಸಮಸ್ಯೆ

water problem1
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಜಡ್ಕಲ್ ಗ್ರಾಮದಲ್ಲಿ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಜಡ್ಕಲ್, ಮುದೂರು, ಹಾಲ್ಕಲ್, ಕೊಲ್ಲೂರು, ಹೊಸೂರು ಪರಿಸರದ ಕೃಷಿಕರಿಗೆ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆಯಿಂದ ಅಡಕೆ, ಬಾಳೆ ತೋಟಗಳಿಗೆ ನೀರುಣಿಸಲಾಗದೆ ಕೃಷಿ ಬಾಡುತ್ತಿದೆ. ಮನೆಯಲ್ಲಿರುವ ಟಿವಿ, ವಿದ್ಯುತ್ ಉಪಕರಣಗಳು ಹಾಳಾಗುತ್ತಿವೆ.

ತಲ್ಲೂರು ಸಬ್‌ಸ್ಟೇಶನ್ ಮೂಲಕ ಜಡ್ಕಲ್ ಪರಿಸರಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದ್ದು, ಹಿಂದೆ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ದಿನೇದಿನೆ ಹೊಸ ವಿದ್ಯುತ್ ಸಂಪರ್ಕ, ಕೈಗಾರಿಕೆಗೆ ನೀರೆತ್ತುವ ಮೋಟಾರ್ ಬಳಕೆ ದುಪ್ಪಟ್ಟಾಗಿದ್ದರಿಂದ ಈ ಸಮಸ್ಯೆ ಆರಂಭವಾಗಿದೆ. ವಿದ್ಯುತ್ ವೋಲ್ಟೇಜ್ ಸಮಸ್ಯೆ ಹಿನ್ನೆಲೆಯಲ್ಲಿ ಗೋಳಿಹೊಳೆಯಲ್ಲಿ 110 ಕಿ.ವ್ಯಾ. ಸಬ್‌ಸ್ಟೇಶನ್ ಮಾಡಲು ಸಿದ್ಧತೆಯಾಗಿದ್ದು, ಶೇ.80ರಷ್ಟು ಕಾಮಗಾರಿ ಪೂರ್ಣವಾಗಿದೆ. ಗೋಳಿಹೊಳೆಯಲ್ಲಿ ವಿದ್ಯುತ್ ಪ್ರಸರಣ ಘಟಕ ಆರಂಭವಾದರೆ ಜಡ್ಕಲ್ ಅಲ್ಲದೆ, ಕೊಲ್ಲೂರು ಕೂಡ ಲೋ ವೋಲ್ಟೇಜ್ ಸಮಸ್ಯೆಯಿಂದ ಮುಕ್ತಿ ಹೊಂದಲಿದೆ ಎಂದು ಮೆಸ್ಕಾಂ ಎಡಬ್ಲುೃಇ ತಿಳಿಸಿದ್ದಾರೆ.

ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರೆತ್ತುವ ಹೆಚ್ಚು ಶಕ್ತಿಯ ಪಂಪ್‌ಗಳ ಬಳಕೆಯಿಂದ ಸಮಸ್ಯೆಯಾಗಿದೆ. ಕೃಷಿಗೆ ವಿದ್ಯುತ್ ಉಚಿತ ಸಂಪರ್ಕ ದುರುಪಯೋಗವಾಗುತ್ತಿದೆ ಎಂಬ ಆರೋಪವೂ ಇದೆ. ಜಡ್ಕಲ್, ಮುದೂರು, ಹಾಲ್ಕಲ್ ಪ್ರದೇಶದಲ್ಲಿ ಅಡಕೆ, ತೆಂಗು, ತರಕಾರಿ ಬೆಳೆಗೆ ಹಿಂದೆ ನೀರುಣಿಸುತ್ತಿದ್ದರೆ, ಪ್ರಸಕ್ತ ಗೇರು, ರಬ್ಬರ್ ಗಿಡಗಳಿಗೂ ನೀರು ಹಾಯಿಸಿ ಹೊಳೆ ಹರಿವನ್ನೇ ಬತ್ತಿಸಲಾಗುತ್ತಿದೆ. ಹೊಳೆಗಳ ನೀರು ಖಾಲಿ ಮಾಡುವ ಮೂಲಕ ಕಾಡುಪ್ರಾಣಿ, ಸಾಕುಪ್ರಾಣಿಗಳಿಗೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೊಳೆ ಇನ್ನಿತರ ನೀರಿನ ಮೂಲದಿಂದ ನೀರೆತ್ತಲು ನೀರಾವರಿ ಇಲಾಖೆ ಪರವಾನಗಿ ಪಡೆಯಬೇಕೆಂಬುದು ಕಡ್ಡಾಯ ನಿಯಮ. ಆದರೆ ಅದ್ಯಾವುದೂ ಅನ್ವಯವಾಗದೆ ನೀರೆತ್ತಲಾಗುತ್ತದೆ.

ಜಡ್ಕಲ್ ಗ್ರಾಮ ಸರಹದ್ದಿನಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರೆತ್ತುವ ಮೋಟಾರ್ ಸುಟ್ಟು ಹೋಗುತ್ತಿವೆ. ಲೋ ವೋಲ್ಟೇಜ್ ಸಮಸ್ಯೆ ತೀವ್ರವಾಗಿದ್ದು, ವಿದ್ಯುತ್ ಬೆಳಕಲ್ಲಿ ಓದುವುದಕ್ಕೂ ಕಷ್ಟವಾಗಿ ವಿದ್ಯಾರ್ಥಿಗಳ ಭವಿಷ್ಯ ಕತ್ತಲಾಗುತ್ತಿದೆ. ನೂರಾರು ಎಕರೆ ತೋಟ, ಬಾಳೆ ಕೃಷಿ ನೀರಿಲ್ಲದೆ ಹಾಳಾಗುತ್ತಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಸುಕುಮಾರ ಶೆಟ್ಟಿ ಅವರ ಗಮನಕ್ಕೂ ತರಲಾಗಿದೆ.

ಚಂದ್ರ ಪೂಜಾರಿ, ಕೃಷಿಕ, ವಿಜಯವಾಣಿ ವಿತರಕ, ಜಡ್ಕಲ್ ಗ್ರಾಮ ಸೆಳಕೋಡು

ಸದ್ಯ ತಲ್ಲೂರು ಸಬ್‌ಸ್ಟೇಶನ್ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆ, ಅತೀ ಹೆಚ್ಚು ಅಶ್ವಶಕ್ತಿ ಮೋಟಾರ್ ಬಳಕೆಯಿಂದ ವೋಲ್ಟೇಜ್ ಸಮಸ್ಯೆ ಸೃಷ್ಟಿಯಾಗಿದೆ. ಗೋಳಿಹೊಳೆ ಸಬ್‌ಸ್ಟೇಶನ್ ಮೂಲಕ ವಿದ್ಯುತ್ ವಿತರಣೆ ಆರಂಭವಾದರೆ ಜಡ್ಕಲ್, ಹಾಲ್ಕಲ್, ಕೊಲ್ಲೂರು ಪ್ರದೇಶದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಪರಿಹಾರವಾಗಲಿದೆ. ಗೋಳಿಹೊಳೆ ವಿದ್ಯುತ್ ವಿತರಣೆ ವ್ಯವಸ್ಥೆ ಶೇ.80ರಷ್ಟು ಕೆಲಸ ಪೂರ್ಣಗೊಂಡಿದ್ದು, ಶೀಘ್ರ ಕಾರ‌್ಯಾರಂಭ ಮಾಡಲಿದೆ.

ಹರೀಶ್, ಎಡಬ್ಲುೃಇ, ಮೆಸ್ಕಾಂ, ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net