

ಉಡುಪಿ: ಹಲಸಿನ ಮೌಲ್ಯವರ್ಧನೆ ಮಾಡಿ ರೈತರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶದಿಂದ ಹಲಸಿನ ಮೇಳಗಳನ್ನ ಅಯೋಜಿಸಲಾಗುತ್ತಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಗುರುವಾರ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ) ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ರೋಬೋಸಾಫ್ಟ್ ಟೆಕ್ನೋಲಾಜಿಸ್ ಪ್ರೈ.ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಪೌಷ್ಠಿಕ ಆಹಾರಗಳಲ್ಲಿ ಒಂದಾದ ಹಲಸು ಹೇರಳವಾಗಿ ಉತ್ಪಾದನೆಯಾಗುತ್ತದೆ. ಇದಕ್ಕೆ ಹೆಚ್ಚಿನ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯನ್ನು ಒದಗಿಸುವುದರಿಂದ ರೈತರು ಹೆಚ್ಚಿನ ಲಾಭ ಪಡೆಯುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ , ಹಲಸಿನಿಂದ ವಿವಿಧ ರೀತಿಯ ಖಾದ್ಯ ಉತ್ಪನ್ನಗಳನ್ನು ದೇಶ ವಿದೇಶಗಳಿಗೆ ರಫ್ತು ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಲು ರೈತರು ಮುಂದಾಗಬೇಕು ಎಂದರು.
ರೋಬೋಸಾಫ್ಟ್ ಟೆಕ್ನೋಲಾಜಿಸ್ ಪ್ರೈ.ಲಿ ವತಿಯಿಂದ ಸಾಮಾಜಿಕ ಹೊಣೆಗಾರಿಕ ನಿಧಿಯಿಂದ 48.5 ಲಕ್ಷ ರೂ ವೆಚ್ಚದಲ್ಲಿ ರೈತ ಸೇವಾ ಕೇಂದ್ರದ ಮೇಲ್ಛಾವಣಿ ನಿರ್ಮಿಸಿದ್ದು, ಜಿಲ್ಲಾಧಿಕಾರಿ ಕೂರ್ಮಾರಾವ್ ಉದ್ಘಾಟಿಸಿದರು.
ರೋಬೋಸಾಫ್ಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವೀತೇಜ ಬೊಮ್ಮಿರೆಡ್ಡಿ ಪಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ , ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ, ಅಶೋಕ್ ಕಾಮತ್ ನಿರೂಪಿಸಿದರು. ರೋಬೋಸಾಫ್ಟ್ ಕಂಪೆನಿಯ ಹಣಕಾಸು ವಿಭಾಗದ ನಾಗೇಶ್ ದೊಂಡಿಯ ವಂದಿಸಿದರು.