ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಲಸು ಹಬ್ಬಕ್ಕೆ ಸಂಭ್ರಮದ ಚಾಲನೆ

7
Published on

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಹಲಸು ಹಬ್ಬಕ್ಕೆ ಶನಿವಾರ ಚಾಲನೆ ದೊರೆಯಿತು.

ಗ್ರಾಹಕರು ಮತ್ತು ರೈತರಿಗೆ ಹಲಸಿನ ಹಣ್ಣಿನ ಮಹತ್ವ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಜತೆಗೂಡಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಹಲಸು ಹಬ್ಬವನ್ನು ಶನಿವಾರ ಬೆಳಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ ಮತ್ತು ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಿದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೈತ ಶಿವನಾಪುರದ ರಮೇಶ್, ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ಎಂ.ಎಲ್.ನಾಗೇಶ್, ಕಾರ್ಯದರ್ಶಿ ಎಂ.ದೇವರಾಜು ಹಾಗೂ ಸಹಜ ಸಮೃದ್ಧ ಸಂಸ್ಥೆಯ ಕೃಷ್ಣಪ್ರಸಾದ್ ಇದ್ದರು.

ಮೇಳದಲ್ಲಿ ಕರ್ನಾಟಕ, ಕೇರಳ, ಮಲೇಶಿಯಾ, ವಿಯೆಟ್ನಾಂ, ಥೈಲ್ಯಾಂಡಿನ ಹೆಸರಾಂತ ಹಲಸಿನ ತಳಿಗಳ ಕಾಯಿ ಮತ್ತು ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶ-ವಿದೇಶಗಳಿಂದ 20ಕ್ಕೂ ಹೆಚ್ಚು ತಳಿಯ ಹಲಸಿನ ಹಣ್ಣು ಮತ್ತು ಗಿಡಗಳು ನೋಡುಗರನ್ನು ಆಕರ್ಷಿಸಿದ್ದರೆ, ಹಲಸಿನ ಹಣ್ಣು ಮತ್ತು ಕಾಯಿಯಿಂದ ತಯಾರಿಸಿದ ವಿವಿಧ ಖಾದ್ಯಗಳು ಆಹಾರ ಪಿಯರ ಬಾಯಲ್ಲಿ ನೀರೂರಿಸಿದವು.

ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಜತೆಗೆ ಹಲಸಿನ ಐಸ್‌ಕ್ರೀಂ, ಚಿಪ್ಸ್, ಚಾಕಲೇಟ್, ಹಪ್ಪಳ, ಹಲ್ವಾ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿ, ಹಲಸಿನ ಪಾಯಸದ ಹತ್ತಾರು ಮಳಿಗಗಳು ಆಹಾರ ಪ್ರಿಯರಿಂದ ತುಂಬಿ ಹೋಗಿದ್ದವು. ಹಾಗೆಯೇ ಮೇಳದಲ್ಲಿ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹಚ್ಚುವ ಯಂತ್ರವೂ ನೋಡುಗರ ಗಮನ ಸೆಳೆಯಿತು. ಹಬ್ಬದಲ್ಲಿ ಹೆಗ್ಗಡದೇವನಕೋಟೆೆ, ಕೊಳ್ಳೇಗಾಲ, ಪಿರಿಯಾಪಟ್ಟಣ, ಕೆ.ಆರ್.ಪೇಟೆ, ತುಮಕೂರು, ಹಾವೇರಿ ಮತ್ತು ಶಿವಮೊಗ್ಗ ಭಾಗದ ಹಲಸಿನ ಬೆಳೆಗಾರರು ಗುಣಮಟ್ಟದ ಹಲಸಿನ ಹಣ್ಣುಗಳನ್ನು ತಂದಿದ್ದರು. ಚೇಳೂರಿನ ಕೆಂಪು ಹಲಸು, ನಾಗರಹೊಳೆ ಕಾಡಿನ ಬಿಳಿ ಹಲಸು, ಕೊಡಗಿನ ರುದ್ರಾಕ್ಷಿ ಹಲಸು ಹೆಚ್ಚು ಮಾರಾಟವಾಯಿತು. ಕರ್ನಾಟಕ, ಕೇರಳ, ಮಲೇಶಿಯ, ವಿಯೆಟ್ನಾಂ, ಥೈಲೆಂಡಿನ ಹಲಸಿನ ಕಾಯಿ ಮತ್ತು ಹಣ್ಣು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಡೆಂಗ್ ಸೂರ್ಯ, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ, ಸರ್ವಋತು, ಲಾಲ್‌ಬಾಗ್ ಮಧುರ, ಥಾಯ್‌ರೆಡ್, ವಿಯೆಟ್ನಾಂ ಸೂಪರ್ ಹರ್ಲಿ, ಗಮ್‌ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ 25ಕ್ಕೂ ಹೆಚ್ಚಿನ ಜನಪ್ರಿಯ ಹಲಸಿನ ತಳಿಯ ಗಿಡಗಳು ಮಾರಾಟಕ್ಕಿಡಲಾಗಿತ್ತು. ಈ ಮೂಲಕ ಸ್ಥಳೀಯ ರೈತರು ಹೊಸ ತಳಿಯ ಹಲಸು ಬೆಳೆಯಲು ಅವಕಾಶ ಕಲ್ಪಿಸಿದಂತಾಗಿತ್ತು.

ರೈತರಿಗೆ ತರಬೇತಿ

ಹಲಸಿನ ಹಬ್ಬದಲ್ಲಿ ಹಣ್ಣು ಮತ್ತು ಅದರ ಖಾದ್ಯಗಳ ಮಾರಾಟದ ಜತೆಗೆ ಹಲಸು ಬೆಳೆಯುವ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಲಸನ್ನು ಮಾರಾಟ ಮಾಡುವ ಹಾಗೂ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಬಗ್ಗೆ ತಜ್ಞರಿಂದ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಸಿದ್ಧ, ಶಂಕರ ಹಲಸಿಗೆ ಬೇಡಿಕೆ: ಮೇಳಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ತಮಗೆ ಬೇಕಾದ ಹಣ್ಣನ್ನು ಖರೀದಿಸಿದರು. ಈ ಸಂದರ್ಭ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೋಂದಣಿಯಾಗಿರುವ ಕೆಂಪು ಹಲಸಿನ ತಳಿಗಳಾದ ಸಿದ್ಧ, ಮತ್ತು ಶಂಕರ ಹಲಸಿನ ಗಿಡಗಳು ಹೆಚ್ಚು ಮಾರಾಟವಾದವು. ಜ್ಯೂಸ್ ಬಿಲ್ವ ಗಿಡಗಳನ್ನು ಸಹ ಮಾರಾಟಕ್ಕಿಡಲಾಗಿತ್ತು.

ಗಮನ ಸೆಳೆದ ಸ್ಪರ್ಧೆ

ಹಲಸು ಹಬ್ಬದ ಮೊದಲ ದಿನವಾದ ಶನಿವಾರ ಸಂಜೆ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಪರ್ಧೆ ನಡೆಯಿತು. ಮಕ್ಕಳು ಮತ್ತು ಹಿರಿಯರು ಮನೆಯಲ್ಲಿ ಹಲಸಿನ ಚಿತ್ರ ಬರೆದು ಮೇಳಕ್ಕೆ ತಂದು ಪ್ರದರ್ಶಿಸುವ ಮೂಲಕ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇಂದು ಹಣ್ಣು ತಿನ್ನುವ ಸ್ಪರ್ಧೆ

ಭಾನುವಾರ ಮಧ್ಯಾಹ್ನ 2 ಗಂಟೆಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ ಬಹುಮಾನ ನೀಡಲಾಗುತ್ತದೆ. ಮಕ್ಕಳು ಮತ್ತು ಹಿರಿಯರಿಗಾಗಿ ಮನೆಯಲ್ಲಿ ಹಲಸಿನ ಚಿತ್ರ ಬರೆಯಿರಿ, ಮೇಳಕ್ಕೆ ತಂದು ಪ್ರದರ್ಶಿಸಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net