

ಮೈಸೂರು: ಜನರಿಗೆ ಹಲಸಿನ ಮಹತ್ವ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ದ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ‘ಹಲಸಿನ ಹಬ್ಬ’ಕ್ಕೆ ಶನಿವಾರ ಚಾಲನೆ ದೊರೆಯಿತು.
ಹಲಸು ಹಬ್ಬದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿಗಳು ಗಮನ ಸೆಳೆಯುತ್ತಿವೆ. ತುಮಕೂರಿನ ಚಂದ್ರ ಹಲಸು, ತೂವಿಕೆರೆ ಮೂಲದ ತೂವಿಕೆರೆ ಹಲಸು, ಅತ್ಯಂತ ಸಣ್ಣ ಗಾತ್ರದ ರುದ್ರಾಕ್ಷಿ ಹಲಸು, ಬೆಂಗಳೂರಿನ ಲಾಲ್‌ಬಾಗ್ ಮಧುರ ಹಲಸು, ದೊಡ್ಡಬಳ್ಳಾಪುರದ ಸದಾನಂದ ಹಲಸು, ಬೆಂಗಳೂರಿನ ಭೈರಸಂದ್ರ ಹಲಸು, ತಿಪಟೂರಿನ ಸಂಬೋ ಶಿವ ಹಲಸು, ಕರಾವಳಿ ಮತ್ತು ಮಲೆನಾಡು ಭಾಗದ ಹೆಬ್ಬಲಸು, ಅಂಟು ರಹಿತ ಅಲಸು, ಸಿಂಗಾಪುರ ಹಲಸು, ಜಾನಗೆರ ಹಲಸುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜನರು ಹಲಸಿ ಹಣ್ಣುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಕೆಂಪು ಬಣ್ಣ ಹೊಂದಿರುವ ತುಮಕೂರಿನ ಸಿದ್ದು ಹಲಸು ಖರೀದಿಸಲು ಜನರು ಹೆಚ್ಚಿನ ಆಸಕ್ತಿ ತೋರಿದರು. ಹಲಸಿನ ಹಣ್ಣಿನೊಂದಿಗೆ ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿ ಮಾರಾಟಕ್ಕೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಶಂಕರ ಹಲಸು, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ, ಸರ್ವ ಋತು, ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್‌ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಹೆಸರಾಂತ ಹಲಸಿನ ತಳಿಯ ಗಿಡಗಳು ಹಾಗೂ ‘ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರ’ದಲ್ಲಿ ನೊಂದಣಿಯಾಗಿರುವ ರಾಜ್ಯದ ಮೊದಲ ಕೆಂಪು ಹಲಸಿನ ತಳಿ ಸಿದ್ದು ಹಲಸು ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹಲಸಿನ ಹಬ್ಬಕ್ಕೆ ಚಾಲನೆ ನೀಡಿದರು. ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಕೃಷ್ಣಪ್ರಸಾದ್, ರೋಟರಿ ಪಶ್ಚಿಮ ಸಂಸ್ಥೆ ಅಧ್ಯಕ್ಷ ಎಸ್.ಕೆ. ಸುಧೀಂದ್ರ, ಕಾರ್ಯದರ್ಶಿ ಎಂ.ಎಲ್. ನಾಗೇಶ್, ಸಹಜ ಕೃಷಿಕ ಕೈಲಾಸಮೂರ್ತಿ, ಪ್ರಗತಿಪರ ರೈತ ಮಹಿಳೆ ಹೇಮಾವತಿ ಹಾಗೂ ಇತರರು ಇದ್ದರು.