ಶಿರಸಿಯಲ್ಲಿ ಹಲಸಿನ ಮೇಳ ಜೂ. 5ರಿಂದ

sirsi Halasu
Published on

ಶಿರಸಿ: ಇಲ್ಲಿಯ ಕದಂಬ ಮಾರ್ಕೆಟಿಂಗ್ ಪ್ರತಿ ವರ್ಷ ಆಯೋಜಿಸುವ ಹಲಸಿನ ಮೇಳವು ಹೊಸ ಮಾರುಕಟ್ಟೆ ಪ್ರಾಂಗಣದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಈ ವರ್ಷ ಜೂ. 5 ಮತ್ತು 6ರಂದು ನಡೆಯಲಿದೆ ಎಂದು ಅಡಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ಜೂ. 5ರಂದು ಸಂಜೆ 4 ಗಂಟೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಳ ಉದ್ಘಾಟಿಸುವರು. ಶಾಸಕ ಭೀಮಣ್ಣ ಟಿ. ನಾಯ್ಕ ಅಧ್ಯಕ್ಷತೆ ವಹಿಸುವರು. ಪ್ರಖ್ಯಾತ ಕೃಷಿವಿಜ್ಞಾನಿ ಡಾ. ಲಕ್ಷ್ಮೀನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದರು.

ಜೂ. 6ರಂದು ಬೆಳಗ್ಗೆ 10.30ರಿಂದ ವಿವಿಧ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಗೋಷ್ಠಿಯಲ್ಲಿ ಪಶ್ಚಿಮಘಟ್ಟದ ಸಸ್ಯವೈವಿಧ್ಯ ಸಂರಕ್ಷಣೆ ಹಾಗೂ ಕೃಷಿಯಲ್ಲಿ ಅದರ ಮಹತ್ವ ಕುರಿತು ಡಾ. ಎಸ್.ಬಿ. ದಂಡಿನ ಉಪನ್ಯಾಸ ನೀಡುವರು. 11.30ಕ್ಕೆ ನಡೆಯುವ 2ನೇ ಗೋಷ್ಠಿಯಲ್ಲಿ ಹಲಸಿನ ಉತ್ಪನ್ನಗಳ ಗುಣಮಟ್ಟ ಹಾಗೂ ಮಾರುಕಟ್ಟೆ ಕುರಿತು ಜಿಲ್ಲೆಯ ಸುಜಯ ಭಟ್ಟ ಅವರು ಪ್ರಾಸ್ತಾವಿಕ ವಿಚಾರ ಹಂಚಿಕೊಳ್ಳುವರು.

ಮಧ್ಯಾಹ್ನ 12.45ಕ್ಕೆ ನಡೆಯುವ 3ನೇ ಗೋಷ್ಠಿಯಲ್ಲಿ ಹಲಸಿನ ತಳಿವೈವಿಧ್ಯ ಸಂರಕ್ಷಣೆ ಹಾಗೂ ಕೃಷಿ ಕುರಿತು ಪ್ರಗತಿಪರ ಕೃಷಿಕ ರಾಜೇಂದ್ರ ಹಿಂಡುಮನೆ ಹಾಗೂ ರಾಜೇಂದ್ರ ಹೆಗಡೆ ನೈಗಾರ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 1.15ಕ್ಕೆ ನಡೆಯುವ 4ನೇ ಗೋಷ್ಠಿಯಲ್ಲಿ ‘ಮೌಲ್ಯವರ್ಧಿತ ಕೃಷಿ ಹಾಗೂ ಆಹಾರ ಉತ್ಪನ್ನಗಳು: ನವೋದ್ಯಮಿಗಳೊಂದಿಗೆ ಮಂಥನ ಕುರಿತು ಸಂವಾದ ನಡೆಯಲಿದೆ. ಸ್ಕೋಡ್​ವೆಸ್, ಶಿರಸಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಅವರು ವಿಷಯ ಪ್ರಸ್ತಾವನೆ ಮಾಡಲಿದ್ದಾರೆ ಎಂದರು.

ಸಮಾರೋಪ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಡಾ. ರೂಪಾ ಪಾಟೀಲ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಮಾರೋಪ ಭಾಷಣ ಮಾಡುವರು.

ಹೊಸ ತಲೆಮಾರಿನ ಕೃಷಿಕರ ಮುಂದಿರುವ ಅನನ್ಯ ಸಾಧ್ಯತೆಗಳು ಎನ್ನುವ ವಿಷಯ ಕುರಿತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ದಿವಾಕರ ಹೆಗಡೆ ಕೆರೆಹೊಂಡ ಅವರ ವಿಶೇಷ ಉಪನ್ಯಾಸ ನೀಡುವರು. ಮಂಜುನಾಥ ಹೆಗಡೆ ಮಾವಿನಕೊಪ್ಪ ಅವರು ಮೇಳದ ನಿರ್ಣಯಗಳನ್ನು ಮಂಡಿಸುವರು. ಬಳಿಕ ಹಲಸಿನ ತಳಿ ಸಂರಕ್ಷಣೆ ಮಾಡಿರುವ ಉತ್ಸಾಹಿ ರೈತರು ಹಾಗೂ ಉದ್ಯಮಿಗಳಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹಲಸಿನ ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪ್ರಮುಖರಾದ ಎಂ.ವಿ. ಹೆಗಡೆ, ಅನಂತ ಅಶೀಸರ, ಗಣೇಶ ಭಟ್ ಉಪ್ಪೋಣಿ, ರಮೇಶ ಹೆಗಡೆ ಕಾನಗೋಡ, ಸತೀಶ ಹೆಗಡೆ, ವಿಶ್ವೇಶ್ವರ ಭಟ್ ಕೋಟೆಮನೆ, ವಿಕಾಸ ಹೆಗಡೆ, ಆದರ್ಶ ಹೆಗಡೆ ಇದ್ದರು.

ಮೇಳದಲ್ಲಿ ಏನೇನು ?

*ನೂರಕ್ಕೂ ಹೆಚ್ಚು ಹಲಸಿನ ಖಾದ್ಯಗಳ ಪ್ರದರ್ಶನ.

* ಕೃಷಿ ನವೋದ್ಯಮಿಗಳ ಉತ್ಪನ್ನಗಳ ಪ್ರದರ್ಶನ, ಎಪ್ಪತ್ತೈದಕ್ಕೂ ಹೆಚ್ಚು ಹಲಸಿನ ಕಾಯಿ-ತಳಿಗಳ ಪ್ರದರ್ಶನ

* ಮಹಿಳೆಯರಿಗೆ ಹಲಸಿನ ಖಾದ್ಯ ಸ್ಪರ್ಧೆ, ಹಲಸಿನ ಉತ್ಪನ್ನಗಳ ಬ್ರಾಂಡ್ ಬಿಡುಗಡೆ, ನೂತನ ಉಪಕರಣ ತಂತ್ರಗಳ ಪ್ರಾತ್ಯಕ್ಷಿಕೆ, ಮಾಹಿತಿ.

*ಗ್ರಾಮೀಣ ಗೃಹೋತ್ಪನ್ನ ಹಲಸಿನ ತಿಂಡಿ-ತಿನಿಸುಗಳ ಮಾರಾಟದ ವ್ಯವಸ್ಥೆ.

*ಹಲಸಿನ ಸಂಸ್ಕರಣೆ, ಮಾರುಕಟ್ಟೆ, ಬ್ರಾಂಡ್ ವಿಷಯಗಳ ಬಗ್ಗೆ ವಿಚಾರಪೂರ್ಣ ಗೋಷ್ಠಿಗಳು, ರೈತ ಸಾಧಕರಿಂದ ಅನುಭವ ಹಂಚಿಕೆ, ಕೃಷಿ ನವೋದ್ಯಮಿಗಳ ಸಮಾವೇಶ ಇತ್ಯಾದಿ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net