ವಿದ್ಯಾರ್ಥಿಗಳು ಛಲ ಒರೆಗೆ ಹಚ್ಚಿದರೆ ಸಾಧನೆ,  ಜಾಬಿನ್ ಕಾಲೇಜಿನ ಜಿಮಖಾನಾ ಚಟುವಟಿಕೆ ಉದ್ಘಾಟನೆ

IMG-20241203-WA0013_1-1.jpg
Published on

ಹುಬ್ಬಳ್ಳಿ: ಶ್ರಮವಿಲ್ಲದೇ ಎಲ್ಲವನ್ನೂ ಪಡೆಯಬೇಕೆಂಬ ಭಾವನೆಯಿಂದಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಆಲಸ್ಯ ಕಂಡು ಬರುತ್ತಿದೆ. ಆದರೆ, ವಿದ್ಯಾರ್ಥಿಗಳು ತಮ್ಮಲ್ಲಿರುವ ಛಲವನ್ನು ಬಡಿದೆಬ್ಬಿಸಿ ಅದನ್ನು ಒರೆಗೆ ಹಚ್ಚುವ ಕೆಲಸ ಮಾಡಿದರೆ ಖಂಡಿತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.

ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಮಖಾನಾ ಹಾಗೂ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇಸ್ರೇಲ್ ನಂತಹ ಅತ್ಯಂತ ಚಿಕ್ಕ ರಾಷ್ಟ್ರ ಜಗತ್ತಿಗೆ ಪೈಪೋಟಿ ನೀಡುವಷ್ಟು ಬಲಾಢ್ಯವಾಗಿ ಬೆಳೆದಿದೆ. ಅಲ್ಲಿನ ಯುವಕರು ತಂತ್ರಜ್ಞಾನ ಬಳಕೆಯಲ್ಲಿ ಮುಂದಿದ್ದಾರೆ. ನಮ್ಮ ದೇಶದಲ್ಲಿಯೂ ಯುವಶಕ್ತಿ ದೊಡ್ಡದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಕ್ರಿಯಾಶೀಲರಾಗಿರುತ್ತಾರೆ. ಅಂತಹ ಚೇತನ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೇಂದ್ರ ಸರ್ಕಾರ ಕೂಡ ಬೇಟಿ ಬಚಾವೋದಂತಹ ಹಲವು ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಮಹಿಳೆಯರು ಇರುವಲ್ಲಿ ಸಂಸ್ಕಾರ, ಶಿಸ್ತು ಇರುತ್ತದೆ. ಕೆಎಲ್ಇ ಸಂಸ್ಥೆಯು ದೇಶದ ಎಲ್ಲ ಕಡೆ ಹರಡಿಕೊಂಡಿದೆ. ಹುಬ್ಬಳ್ಳಿಯಲ್ಲಿ ಬಹುದೊಡ್ಡ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ನಿರ್ಮಿಸುತ್ತಿದೆ. ಸುಚಿರಾಯು ಹಾಗೂ ಹುಬ್ಬಳ್ಳಿ ಕೋ- ಆಪ್ ಆಸ್ಪತ್ರೆಯನ್ನು ತನ್ನ ಸುಪರ್ದಿಗೆ ಪಡೆದು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಉದ್ಯಮ ರಂಗದಲ್ಲಿ ಡಾ. ವಿಜಯ ಸಂಕೇಶ್ವರ ಅವರೇ ಮಾದರಿಯಾಗಿದ್ದಾರೆ. ಇಂತಹ ಮಹನೀಯರ ಆದರ್ಶಗಳನ್ನು ಪಾಲಿಸಿ ಸಾಧನೆ ಮಾಡಬೇಕು. ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಹುರಿದುಂಬಿಸಿದರು.

ವಿದ್ಯಾರ್ಥಿಗಳು ಜೀವನವನ್ನು ಅಷ್ಟೊಂದು ಸುಲಭ ಎಂದು ತಿಳಿಯಬಾರದು. ಕಾಲೇಜು ದಿನಗಳಲ್ಲಿ ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಮುಂದಿನ ಜೀವನ ಸುಗಮವಾಗಲಿದೆ. ಪಾಲಕರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಶಿಕ್ಷಣ ಪಡೆದ ನಂತರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದರು.

ಪದವಿ ಕಾಲೇಜು ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಚನ್ನಪ್ಪ ಜಾಬಿನ, ಡಾ. ಪ್ರಭಾಕರನ್ ಟಿ., ಮಹಾಂತೇಶ, ನಾಡಗೌಡ, ಜಿ.ಬಿ. ಕಲಕೋಟಿ, ಪ್ರಾಚಾರ್ಯ ವಿ.ಆರ್. ವಾಗಮೊಡಿ ಇತರರು ಪಾಲ್ಗೊಂಡಿದ್ದರು.

ಡಾ. ಸ್ನೇಹಾ ನಿರೂಪಿಸಿದರು. ವೈಷ್ಣವಿ ಪ್ರಾರ್ಥನೆ ಹಾಡಿದರು. ಸುಧಾ ಪಾಟೀಲ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net