ಫ್ಯಾಷನ್ ಹೆಸರಲ್ಲಿ ದುಶ್ಚಟಕ್ಕೆ ಬಲಿ

druges
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಇತ್ತೀಚಿನ ದಿನಗಳಲ್ಲಿ ್ಯಾಷನ್ ಪ್ರತಿಷ್ಟೆಯ ಸಂಕೇತವಾಗುತ್ತಿದ್ದು ಇದರ ಹೆಸರಲ್ಲಿ ಅನೇಕರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜಯ್ಯ ಕಳವಳ ವ್ಯಕ್ತಪಡಿಸಿದರು.

ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಮದ್ಯ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಜಾಥಾ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಮಾದಕ ವಸ್ತುಗಳ ವ್ಯಸನ ಮಾನಸಿಕ ಹಾಗೂ ದೈಹಿಕ ಕಾಯಿಲೆಯಾಗಿದ್ದು, ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರ ವಿರುದ್ಧ ಯುವಜನರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ಮಾದಕ ವಸ್ತುಗಳಿಂದ ದೂರವಿರಿ: ದೈಹಿಕ ಶಿಕ್ಷಣ ಶಿಕ್ಷಕ ರವಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ದುಷ್ಪರಿಣಾಮಗಳು ಉಂಟಾಗುತ್ತವೆ. ಮದ್ಯ, ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ, ಗಾಂಜಾ, ಅಫೀಮು, ನೋವು ನಿವಾರಕ ಹಾಗೂ ನಿದ್ರಾಜನಕ ಮಾತ್ರೆಗಳು ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಯುವಕರು ಇಂಥ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಅನುಕರಣೆ ಬೇಡ: ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಯುವಜನತೆಯು ಸಂತೋಷ, ಗೆಳೆಯರ ಒತ್ತಡ, ನೋವು ನಿವಾರಣೆ ನೆಪ, ಆಧುನಿಕ ಜೀವನ ಶೈಲಿ ಅನುಕರುಣೆ ಮಾಡಲು ವ್ಯಸನಕ್ಕೆ ತುತ್ತಾಗುತ್ತಾರೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕ್ಷೇತ್ರ ಅರೋಗ್ಯ ರಕ್ಷಣಾಧಿಕಾರಿ ಜಯಲಕ್ಷ್ಮಿ ಆತಂಕ ವ್ಯಕ್ತಪಡಿಸಿದರು.

ಇದರಿಂದ ಉದ್ಯೋಗದಲ್ಲಿ ತೊಂದರೆ, ಕೌಟುಂಬಿಕ ಸಮಸ್ಯೆಗಳು, ಆತ್ಮಹತ್ಯೆ, ಕಾನೂನು ಬಾಹಿರ ಕೃತ್ಯಗಳು, ದೈಹಿಕ, ಮಾನಸಿಕ ಕಾಯಿಲೆಗಳು, ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಯುವಕರು ಇಂಥ ದುಶ್ಚಟಗಳಿಂದ ದೂರವಿರಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಅರಿವು ಜಾಥಾ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net