ಸಂವಿಧಾನ ಜಾಗೃತಿಗಾಗಿ ಡಿಸಿ ಸೈಕಲ್ ಸವಾರಿ

26f64199-37bd-47c0-8cf6-e3019c60a881
jaata
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾದ್ಯಂತ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾಗೆ ಎಲ್ಲೆಡೆ ಅಭೂತಪೂರ್ವ ಸ್ಪಂದನೆ ಸಿಗುತ್ತಿರುವ ಬೆನ್ನಲ್ಲೆ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರ ಸೈಕಲ್ ಸವಾರಿಗೆ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥದಲ್ಲಿ ಡಿಸಿ ಡಾ.ಎನ್.ಶಿವಶಂಕರ್ ಸೈಕಲ್ ಸವಾರಿ ಮಾಡುತ್ತಾ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸುಮಾರು 2 ಕಿ.ಮೀ ದೂರ ಕ್ರಮಿಸಿದ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸೈಕಲ್ ಸವಾರಿ ತಂಡ ವಿನೂತನವಾಗಿ ಸಾರ್ವಜನಿಕರಿಗೆ ಸಂವಿಧಾನ ಜಾಗೃತಿ ಮೂಡಿಸಿದರು.
ವಿಶೇಷ ಜಾಥಾ: ಭಾರತ ಸಂವಿಧಾನ ಅಂಗೀಕಾರವಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಈ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವಿಶೇಷವಾಗಿ ಜಾಗೃತಿ ಜಾಥಾ ಜರುಗಿಸುವ ಮೂಲಕ ಕಾರ್ಯಕ್ರಮದ ಉದ್ದೇಶ ಸಲವಾಗುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.
ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಪ್ರತಿ ಕಾಯ್ದೆಯ ಮೂಲ ಸಂವಿಧಾನವಾಗಿದೆ, ಸಂವಿಧಾನ ಅಡಿಯಲ್ಲಿ ದೇಶದ ಕಾನೂನು ನಡೆಯುತ್ತಿದೆ. ಯಾವುದು ಮಾತನಾಡಬೇಕು ಯಾವುದು ಮಾತನಾಡಬಾರದು ಎಂದು ವಾಕ್ ಸ್ವಾತಂತ್ರ್ಯ ಹೇಳುತ್ತದೆ ಎಂದು ಹೇಳಿದರು. ಪ್ರತಿ ಪ್ರಜೆಗೂ ಅಂತಹ ವಾಕ್ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಸಮಾನತೆ, ಸ್ವಾತಂತ್ರ್ಯ ಕಲ್ಪಿಸುವ ಸಂವಿಧಾನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಜಾಗೃತಿ ಜಾಥಾ ದೇವನಹಳ್ಳಿ, ಹೊಸಕೋಟೆ ತಾಲೂಕುಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, ದೊಡ್ಡಬಳ್ಳಾಪುರದಲ್ಲಿ ಯಶಸ್ವಿಯಾಗಿ ಜಾಥಾ ನಡೆಯುತ್ತಿದೆ, ಜಾಥಾ ಹೋಗುವ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪೀಠಿಕೆ ಬೋಧನೆ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಬೋಧಿಸಿ, ಸಂವಿಧಾನದ ಮಹತ್ವದ ಬಗ್ಗೆ ಹೇಳಿದರು.
ಸಿಇಒ ಸಾಥ್: ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಅವರು ಸಂವಿಧಾನ ಪೀಠಿಕ ಬೋಧನೆ ಸೇರಿ ಸಂವಿಧಾನ ಕುರಿತ ಮಾಹಿತಿಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net