

ಮಡಿಕೇರಿ:
ಕೊಡಗಿನ ವೀರ ಪುತ್ರ, ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಅತ್ಯಾಕರ್ಷಕವಾದ ಮತ್ತು ಯುವ ಸಮೂಹಕ್ಕೆ ಪ್ರೇರಣಾದಾಯಕವಾದ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಶುಕ್ರವಾರ ನಗರದಲ್ಲಿ ಸಕಲ ಗೌರವಗಳೊಂದಿಗೆ ಮರು ಸ್ಥಾಪಿಸಲಾಯಿತು.
ಜಿಲ್ಲಾಡಳಿತ, ನಗರಸಭೆಯ ಉಸ್ತುವಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಯನ್ನು, ಪುಷ್ಪನಮನದ ಮೂಲಕ ಏರ್ ಮಾರ್ಷಲ್(ನಿ) ನಂದಾ ಕಾರ್ಯಪ್ಪ ಮತ್ತು ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ಅನಾವರಣಗೊಳಿಸಿದರು.
ನೂತನ ಪ್ರತಿಮೆ ಅನಾವರಣದ ಸಂದರ್ಭ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭ ಐದು ದಶಕಗಳ ಹಿಂದೆ ಜ.ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಕಾರಣರಾಗಿದ್ದ ಮಾಜಿ ಸಚಿವ ಎಂ.ಸಿ. ನಾಣಯ್ಯ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ, ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್(ನಿ) ಕಂಡ್ರತಂಡ ಸುಬ್ಬಯ್ಯ, ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ.ಜ.(ನಿ) ಬಿ.ಎ.ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸತೀಶ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮುತ್ತಪ್ಪ ಒಳಗೊಂಡಂತೆ ಮಾಜಿ ಸೈನಿಕರು, ಸಾರ್ವಜನಿಕರು ಜ.ತಿಮ್ಮಯ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
‘ನಾನು ಭಾರತೀಯ ಎನ್ನುವುದು ಮೊದಲು’- ವೀರ ಸೇನಾನಿಯ ಪ್ರತಿಮೆ ಅನಾವರಣಗೊಳಿಸಿದ ಏರ್ ಮಾರ್ಷಲ್(ನಿ) ನಂದಾ ಕಾರ್ಯಪ್ಪ ಮಾತನಾಡಿ, ಜನರಲ್ ಕೆ.ಎಸ್. ತಿಮ್ಮಯ್ಯ ಅವರು ತಮ್ಮ ಸೈನ್ಯದ ಅತ್ಯಪೂರ್ವವಾದ ಕಾರ್ಯ ವೈಖರಿಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗೌರವಾದರಗಳನ್ನು ಪಡೆದ ಮಹಾನ್ ಸೇನಾನಿಯಾಗಿದ್ದಾರೆ ಎಂದರು. ಜನರಲ್ ತಿಮ್ಮಯ್ಯ ಅವರು ಬದುಕಿನುದ್ದಕ್ಕೂ ‘ನಾನು ಭಾರತೀಯ ಎನ್ನುವುದು ಮೊದಲು. ಉಳಿದೆಲ್ಲವೂ ನಂತರದ್ದು’ ಎನ್ನುವ ಮಹಾನ್ ಚಿಂತನೆ ಹೊಂದಿದ್ದರು. ಅಂತಹ ಉದಾತ್ತ ಚಿಂತನೆ ಯುವ ಸಮೂಹದ್ದಾಗಿರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ವೀರಸೇನಾನಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಉದಾತ್ತ ಚಿಂತನೆಗಳು ಯುವ ಸಮೂಹಕ್ಕೆ ಪ್ರೇರಣಾದಾಯವಾಗಿರಲಿ ಎನ್ನುವ ಚಿಂತನೆಗಳಡಿ ೧೯೭೩ ರಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ಎಂ.ಸಿ. ನಾಣಯ್ಯ ಅವರು ವೀರಸೇನಾನಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದರೆಂದು ಸ್ಮರಿಸಿದರು.
ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ.ಜ.ಬಿ.ಎ. ಕಾರ್ಯಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರೊಬ್ಬ ಮಹಾನ್ ಸೈನಿಕರಾಗಿದ್ದವರೆಂದು ಬಣ್ಣಿಸಿದರು.
ಮಾಜಿ ಸಚಿವರಾದ ಎಂ.ಸಿ. ನಾಣಯ್ಯ ಅವರು ಮಾತನಾಡಿ, ೧೯೭೩ ರಲ್ಲಿ ಜ.ತಿಮ್ಮಯ್ಯ ಅವರ ಪ್ರತಿಮೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರು ಅನಾವರಣಗೊಳಿಸಿದ್ದು, ಆ ಸಂದರ್ಭ ಕೇಂದ್ರ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಪಾಲ್ಗೊಂಡುದನ್ನು ಸ್ಮರಿಸಿದರಲ್ಲದೆ, ಅಂದು ರಾಜ್ಯ ಸರ್ಕಾರ ಅಸ್ತ್ತಿತ್ವದಲ್ಲೆ ಇರಲಿಲ್ಲ. ಅಂತಹ ಸಂದರ್ಭವೂ ಅಂದಿನ ರಾಜ್ಯಪಾಲ ಧರ್ಮವೀರ ಅವರು ಪ್ರತಿಮೆ ಸ್ಥಾಪನೆಗೆ ೧೦ ಸಾವಿರ ನೆರವನ್ನು ನೀಡಿದ್ದನ್ನು ಸ್ಮರಿಸಿ, ಪ್ರತಿಮೆಯನ್ನು ಅಂದು ಮುಂಬೈನ ಶಿಲ್ಪಿ ವಾಗ್ ಅವರು ೩೦ ಸಾವಿರ ರೂ.ಗಳಿಗೆ ನಿರ್ಮಿಸಿಕೊಟ್ಟುದನ್ನು ಸ್ಮರಿಸಿದರು.
ಪ್ರತಿಮೆಗೆ ಭವ್ಯ ಸ್ವಾಗತ- ಮೈಸೂರಿನಿಂದ ಸಜ್ಜುಗೊಂಡು ಮಡಿಕೇರಿಗೆ ಶುಕ್ರವಾರ ೧೧.೩೦ ಗಂಟೆಯ ಹೊತ್ತಿಗೆ ಫೀ.ಮಾ. ಕಾರ್ಯಪ್ಪ ವೃತ್ತಕ್ಕೆ ಆಗಮಿಸಿದ ಜ.ತಿಮ್ಮಯ್ಯ ಪ್ರತಿಮೆಯನ್ನು ಹೊತ್ತ ಪ್ರತಿಮೆ ಮರು ಸ್ಥಾಪನಾ ವಾಹನವನ್ನು ಶಾಸಕರಾದಿಯಾಗಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ಕೊಡವ ವಾಲಗದೊಂದಿಗೆ ಗೌರವ ಪೂರ್ವಕವಾಗಿ ಸ್ವಾಗತಿಸಿದರು.
ಬಳಿಕ ವೀರಸೇನಾನಿಯ ಪ್ರತಿಮೆಯ ಮೆರವಣಿಗೆಯನ್ನು ಸಾಂಪ್ರದಾಯಿಕ ಕೊಂಬ್ ಕೊಟ್ಟ್ ವಾಲಗದೊಂದಿಗೆ ಜನರಲ್ ತಿಮ್ಮಯ್ಯ ವೃತ್ತದ ವರಗೆ ನಡೆಸಲಾಯಿತು. ಕೊಡವ ಉಡುಪಿನೊಂದಿಗೆ ವಿವಿಧ ಸಂಘ ಸಂಸ್ಥೆಗಳು , ಜ.ತಿಮ್ಮಯ್ಯ ಪಬ್ಲಿಕ್ ಶಾಲೆಯ ಎನ್‌ಸಿಸಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಮಾಜಿ ಸೈನಿಕರು ಮೆರವಣಿಗೆಯಲ್ಲಿ ಸಾಗಿ ಬಂದುದು ವಿಶೇಷವಾಗಿತ್ತು, ಜೊತೆಗೆ ಬೈಕ್ ಜಾಥವು ಗಮನ ಸೆಳೆಯಿತು. ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ಅವರು ಸ್ವಾಗತಿಸಿದರು, ಮಾದೇಟಿರ ಬೆಳ್ಯಪ್ಪ ಹಾಗೂ ಅನಿತಾ ನಿರೂಪಿಸಿದರು, ಕಾವ್ಯ ಪ್ರಾರ್ಥಿಸಿದರು, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ವಂದಿಸಿದರು.