

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಏ.30ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದ್ದಾರೆ ಎಂದು ಶಿವಮೊಗ್ಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಬಿಜೆಪಿ ಪರ ಅಲೆ ಹೆಚ್ಚುತ್ತಿದೆ. ಶಿವಮೊಗ್ಗದಲ್ಲಿ ಅತಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನದಲ್ಲಿ ಶೇಕಡವಾರು ಮತದಾನ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಶೇ.6 ಕಡಿಮೆಯಾಗಿದೆ. ಆದರೂ 14ರಲ್ಲಿ ಕನಿಷ್ಠ 13 ಕ್ಷೇತ್ರಗಳಲ್ಲಿ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಮತ್ತು ದೇಶದಲ್ಲಿ ಮತದಾನ ಹೆಚ್ಚಾಗಬೇಕು. ಜನರು ಹೆಚ್ಚೆಚ್ಚು ಪೋಲಿಂಗ್ ಬೂತ್‌ಗೆ ಬಂದು ಮತ ಚಲಾವಣೆ ಮಾಡಬೇಕಿದೆ. ಯುವಕರು ಕೂಡ ಹೆಚ್ಚಾಗಿ ಬಂದು ಮತದಾನ ಮಾಡಬೇಕು. ತುಮಕೂರಿನಲ್ಲಿ ವೃದ್ಧೆಯೊಬ್ಬರು ಮನೆಯಲ್ಲೇ ಮತದಾನ ನಿರಾಕರಿಸಿ ಬೂತ್‌ಗೆ ಬಂದು ಮತ ಹಾಕಿ ಮನೆಗೆ ತೆರಳಿದ ಮೇಲೆ ನಿಧನರಾಗಿದ್ದಾರೆ. ಹೀಗೆ ಅವರು ಮತದಾನದ ಜಾಗೃತಿ ಮೂಡಿಸಿದ್ದಾರೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮುಖಾಂತರ ಜನರನ್ನು ತಲುಪಲು ಯತ್ನಿಸುತ್ತಿದೆ. ಆದರೆ ಅದು ಸಫಲವಾಗಲ್ಲ. ಮಹಿಳೆಯರಿಗೆ 1 ಲಕ್ಷ ರೂ. ನೀಡುವ ಭರವಸೆ ನೀಡಿದೆ. ಆದರೆ ನಮ್ಮ ದೇಶದಲ್ಲಿ 68 ಕೋಟಿ ಮಹಿಳೆಯರಿದ್ದು, 68 ಲಕ್ಷ ಕೋಟಿ ರೂ. ಬೇಕಾಗುತ್ತದೆ. ದೇಶದ ಬಜೆಟ್ ಇರುವುದೇ 48 ಲಕ್ಷ ಕೋಟಿ ರೂ. ಉಳಿದ ಹಣ ಎಲ್ಲಿಂದ ತರುತ್ತಾರೆ? ಇದು ಬೋಗಸ್ ಗ್ಯಾರಂಟಿ. ಮೋದಿ ಗ್ಯಾರಂಟಿಯೇ ಶಾಶ್ವತ ಗ್ಯಾರಂಟಿಯಾಗಿದ್ದು ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಮೋದಿ ಗ್ಯಾರಂಟಿಯೇ ಬೇಕು ಎಂದು ಹೇಳಿದರು.
ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರುವ ವಿಚಾರದ ಬಗ್ಗೆ ಮಾತನಾಡಿ, ಚುನಾವಣೆ ಇದ್ದಾಗ ಅವರವರ ಪಕ್ಷದ ನಾಯಕರು, ಮುಖಂಡರು ಬರುವುದು ಸಹಜ. ಅವರು ಬಂದು ಹೋದರೆ ನಮಗೆ ಹೆಚ್ಚೇನೂ ವ್ಯತ್ಯಾಸ ಆಗಲ್ಲ. ಕಲಾವಿದರು ಬಂದರೂ ಜನ ಅವರನ್ನು ನೋಡಿ ಖುಷಿಪಡುತ್ತಾರೆ. ಅದು ಮತವಾಗಿ ಪರಿವರ್ತನೆಯಾಗಲ್ಲ ಎಂದು ಅಭಿಪ್ರಾಯಪಟ್ಟರು.
ಸಿದ್ಧಾಗಂಗಾ ಶ್ರೀ ಭೇಟಿ
ತುಮಕೂರಿನ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶನಿವಾರ ವಿನೋಬನಗರದ ಬಿ.ವೈ.ರಾಘವೇಂದ್ರ ಅವರು ಮನೆಗೆ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆಗೂಡಿ ಸಕುಟುಂಬ ಸಮೇತ ಶ್ರದ್ಧಾಪೂರ್ವಕವಾಗಿ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸಿದರು.