

*ಪಿ.ಬಿ.ಹರೀಶ್ ರೈ
ಮಂಗಳೂರು : ಆಂಗ್ಲರ ಆಳ್ವಿಕೆಯಲ್ಲಿ ಉತ್ತರ ಪ್ರದೇಶದ ಗೋರಕ್‌ಪುರ್ ಜಿಲ್ಲೆಯ ಕಲೆಕ್ಟರ್ ಸೇವೆ ಸಲ್ಲಿಸಿದ ಅಧಿಕಾರಿ ದೇಶ ಸ್ವಾತಂತ್ರೃ ಪಡೆದ ಬಳಿಕ ಉಡುಪಿ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದು ಈಗ ಇತಿಹಾಸ. ಜೆ.ಎಂ.ಲೋಬೊ ಪ್ರಭು ಎಂದೇ
ಹೆಸರುವಾಸಿಯಾಗಿದ್ದ ಬ್ರಿಟಿಷ್ ಕಾಲದ ಅಧಿಕಾರಿ ಜೋಸೆಫ್ ಮಥಾಯಿಸ್ ಲೋಬೊ ಪ್ರಭು ಅವರು 1967ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಚ್ಚರಿಯ ಗೆಲುವು ಸಾಧಿಸಿದವರು.
* ಐಸಿಎಸ್ ತೇರ್ಗಡೆ :
ಜೆ.ಎಂ.ಲೋಬೋ ಪ್ರಭು 1906ರಲ್ಲಿ ಮಂಗಳೂರಿನ ಪ್ರತಿಷ್ಠಿತ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮಿಡಿಯೇಟ್ ಶಿಕ್ಷಣ ಪಡೆದ ಅವರು ಸಣ್ಣ ವಯಸ್ಸಿನಲ್ಲಿಯೇ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ
(ಐಸಿಎಸ್) ಬರೆದಿದ್ದರು. ಇಂಗ್ಲೆಂಡ್‌ನ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲೂ ಅಧ್ಯಯನ ಪೂರೈಸಿದ್ದರು. ಐಸಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿ ಅವರು ಸರ್ಕಾರಿ ಸೇವೆಗೆ ಸೇರ್ಪಡೆಯಾದರು.
*ಯುವ ಅಧಿಕಾರಿ :
ಗೋರಕ್‌ಪುರ್ ಜಿಲ್ಲೆಯ ಕಲೆಕ್ಟರ್ ಸೇವೆ ಸಲ್ಲಿಸಿದ ಲೋಬೊ ಕುದುರೆಗಾಡಿಯಲ್ಲಿ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಗೋರಕ್‌ಪುರ್ ಆಗ ಬಂದ ಭಾರಿ ಪ್ರವಾಹ ಮತ್ತು ಕಾಲರಾ ಕಾಯಿಲೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಸಾವಿರಾರು ಜನರ ಪ್ರಾಣ ಉಳಿಸುವ ಮೂಲಕ ಅಲ್ಲಿನ ಜನತೆಯ ಪ್ರೀತಿಗೆ ಪಾತ್ರರಾದರು. ಆಂಗ್ಲರ ಆಳ್ವಿಕೆಯಲ್ಲಿ ಈಗಿನ ಪಾಕಿಸ್ತಾನ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು.
*ಭಾರತ ಸರ್ಕಾರದ ಸೇವೆ
ಸ್ವಾತಂತ್ರೃ ದೊರೆತ ಬಳಿಕ ಮದ್ರಾಸ್ ಪ್ರಾಂತ್ಯದಲ್ಲಿ ಸೇವಗೆ ನಿಯೋಜನೆಯಾದ ಲೋಬೊ ಪ್ರಭು ಅವರು ಉದ್ಯಮ ಅಭಿವೃದ್ದಿ ಸಂಬಂಧಿಸಿ ಹಲವು ಬಾರಿ ವಿದೇಶಗಳಿಗೆ ನಿಯೋಗದಲ್ಲಿ ತೆರಳಿದ್ದರು. ಆರೋಗ್ಯ ಅಧಿಕಾರಿಯಾಗಿ ನೇಮಕಗೊಂಡ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಅಭಿವೃದ್ದಿಗೆ ಶ್ರಮಿಸಿದ್ದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಅವರು ಬರವಣಿಗೆ, ರಾಜಕೀಯ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು.
* ರಾಜಕೀಯ ಪ್ರವೇಶ :
1962ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು ಕಾಂಗ್ರೆಸ್‌ನ ಶಂಕರ ಆಳ್ವ ವಿರುದ್ಧ ಪರಾಭವಗೊಂಡರು. 1967ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿದ ಲೋಬೊ ಕಾಂಗ್ರೆಸನ ಎಸ್.ಎಸ್.ಕೊಳ್ಕೆಬೈಲ್ ವಿರುದ್ಧ ಜಯ ಸಾಧಿಸಿ ಸಂಸತ್ ಪ್ರವೇಶಿಸಿದರು. ಸರ್ಕಾರಿ ಅಧಿಕಾರಿಯಾಗಿ ಆಳವಾದ ಜ್ಞಾನಹೊಂದಿದ್ದ ಲೋಬೊ ಸಂಸದರಾಗಿಯೂ ಗಮನ ಸೆಳೆದರು. ಆದರೆ 1971ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಿ.ರಂಗನಾಥ ಶೆಣೈ ವಿರುದ್ಧ ಸೋಲು ಅನುಭವಿಸಿದರು. ಬಳಿಕ ರಾಜಕೀಯದಿಂದ ನಿವೃತ್ತರಾದ ಲೋಬೊ 1999ರಲ್ಲಿ ನಿಧನರಾದರು.
*ರಾಜಾಜಿ ರಚಿಸಿದ ಸ್ವತಂತ್ರ ಪಾರ್ಟಿ
ಮೂರನೇ ಮಹಾ ಚುನಾವಣೆ ವೇಳೆ ಕಾಂಗ್ರೆಸ್ ಇಬ್ಭಾಗವಾಗಿತ್ತು. ಜವಾಹರಲಾಲ್ ನೆಹರು ಅವರ ಸರ್ವಾಧಿಕಾರ ವಿರೋಧಿಸಿ ಸಿ.ರಾಜಗೋಪಾಲಚಾರಿ (ರಾಜಾಜಿ) ಕಾಂಗ್ರೆಸ್‌ನಿಂದ ಹೊರಬಂದು ಸ್ವತಂತ್ರ ಪಾರ್ಟಿ ರಚಿಸಿದರು. 1962ರ ಲೋಕಸಭೆ
ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ 18 ಸ್ಥಾನಗಳಿಸಿತ್ತು. ಆದರೆ ಮಂಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಸಾಧ್ಯವಾಗಲಿಲ್ಲ. 1967ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿದ ಲೋಬೋ ಸಹಿತ ಒಟ್ಟು 44 ಅಭ್ಯರ್ಥಿಗಳು ಗೆದ್ದರು. 1974ರಲ್ಲಿ ಸ್ವತಂತ್ರ ಪಾರ್ಟಿ ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿದಳ ಪಕ್ಷದಲ್ಲಿ ವಿಲೀನವಾಯಿತು.