

ಜಗಳೂರು: ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಫೆ.20ರಂದು ಜೆ.ಎಂ. ಇಮಾಂ ಸಾಹೇಬ್ ಅವರ ಕುರಿತ ‘ಮಾನವತೆಯ ಬೆಳಕು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಆಡಳಿತಾಧಿಕಾರಿ ಜೆ.ಕೆ ಮಹಮದ್ ಹುಸೇನ್ ತಿಳಿಸಿದರು.
ಪಟ್ಟಣದ ಜೆ.ಎಂ ಇಮಾಂ ಪ್ರೌಢಶಾಲಾ ಸಭಾಂಗಣದಲ್ಲಿ ಪುಸಕ್ತ ಬಿಡುಗಡೆ ಸಮಾರಂಭ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗುರುವಾರ ಬೆಳಗ್ಗೆ ನಡೆಯುವ ಕಾರ್ಯಕ್ರಮವನ್ನು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಉದ್ಘಾಟಿಸುವರು, ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಕೃತಿ ಬಿಡುಗಡೆಗೊಳಿಸುವರು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಟ್ರಸ್ಟ್ ಗೌರವಾಧ್ಯಕ್ಷ ಜೆ.ಕೆ ಹುಸೇನ್ವಿುಯ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮಹನೀಯರ ತತ್ವ, ಆದರ್ಶಗಳು ಇಂದಿನ ಯುವ ಜನತೆಗೆ ದಾರಿದೀಪವಾಗಲೆಂಬ ಆಶಯದೊಂದಿಗೆ ಜೆ.ಎಂ.ಇಮಾಂ ಟ್ರಸ್ಟ್, ಜೆ.ಎಂ.ಇಮಾಂ ಸ್ಮಾರಕ ಶಾಲೆ ಪ್ರಾರಂಭಿಸಿದೆ ಹಾಗೂ ಕಳೆದ 6 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುವ ಸಂಪ್ರದಾಯ ಅಳವಡಿಸಿಕೊಂಡಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಎನ್.ಟಿ ಎರ್ರಿಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಜಗಳೂರು ತಾಲೂಕನ್ನು ನೀರಾವರಿ ಪ್ರದೇಶಕ್ಕೆ ಒಳಪಡಿಸಲು ಜೆ.ಎಂ ಇಮಾಂ ಸಾಬ್ ಮುಂದಾಗಿದ್ದರು. ತಾಲೂಕಿನ ಸಂಗೇನಹಳ್ಳಿ, ತುಪ್ಪದಹಳ್ಳಿ, ಗಡಿಮಾಕುಂಟೆ ಕೆರೆಗಳನ್ನು ನಿರ್ವಿುಸಿ ಜಲಸಂಭ್ರಮ ಮಾಡಿದ್ದರು. ರಾಜ್ಯದಲ್ಲಿ ಸುಮಾರು 700 ಕೆರೆಗಳನ್ನು ನಿರ್ವಿುಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮೈಸೂರು ಅರಸರ ಕಾಲದಲ್ಲಿ ಒಂಭತ್ತು ಖಾತೆಗಳ ಸಚಿವರಾಗಿದ್ದರು, ನಾಲ್ಕು ಜನ ಮುಖ್ಯಮಂತ್ರಿಗಳ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಎರಡು ಬಾರಿ ಸಂಸದರಾಗಿ ಆಯ್ಕೆ, ಹಂಗಾಮಿ ದಿವಾನರು, ಲೋಕಸಭೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. ಶಿವನ ಸಮುದ್ರ, ಶರಾವತಿ ಕೊಳ್ಳ, ವಾಣಿವಿಲಾಸ ಸಾಗರ ನಿರ್ವಣದಲ್ಲಿ ಇಮಾಂ ಸಾಹೇಬರ ಪಾತ್ರವಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಶಂಕರ್, ಶಿಕ್ಷಕ ಬಿ.ಟಿ ನಾಗರಾಜ್, ಮೇಲ್ವಿಚಾರಕ ಖಾಸೀಂ ಸಾಬ್, ಮಹಮದ್ ಹುಸೇನ್ ಮತ್ತಿತರರಿದ್ದರು.