

ಕೋಲಾರ: ಕೆರೆ ಒತ್ತುವರಿ ಬಗ್ಗೆ ಮನವಿ ಸಲ್ಲಿಸಲು ಮುಂದಾಗಿದ್ದ ರೈತ ಸಂಘದ ಜಿಲ್ಲಾಧ್ಯಕ್ಷೆ ಎ.ನಳನಿ ಅವರನ್ನು ಅವಾಚ್ಯ ಪದ ಬಳಸಿ ಆಗೌರವ ತೋರಿರುವ ಕಾನೂನು ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕೆರೆ ಒತ್ತುವರಿ ವಿಚಾರವಾಗಿ ಸಚಿವರ ಗಮನ ಸೆಳೆಯುವುದು ನಳಿನಿ ಉದ್ದೇಶವಾಗಿತ್ತಾದ್ದರಿಂದ ಸಚಿವರಿಗೆ ಮನವಿ ಸಲ್ಲಿಸಲು ತೆರಳಿದ್ದರು. ಸಚಿವರು ಮನವಿ ಸ್ವೀಕರಿಸಿ ಪರಿಶೀಲಿಸುವುದಾಗಿ ಹೇಳಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಏಕಾಏಕಿ ದರ್ಪ ತೋರಿ ಧಮ್ಕಿ ಹಾಕಿದ್ದಾರಲ್ಲದೆ, ಅಸಾಂವಿಧಾನಿಕ ಭಾಷಾ ಪ್ರಯೋಗ ಮಾಡಿ ಸಚಿವ ಪದವಿಗೆ ಕಳಂಕವನ್ನುಂಟು ಮಾಡಿದ್ದಾರೆ ಎಂದು ಕಾರ್ಯಕರ್ತರು ದೂರಿದರು.
ಕಾನೂನು ಸಚಿವರಾಗಿ ಈ ರೀತಿ ಮಾತನಾಡಿರುವುದು ಸಂವಿಧಾನಕ್ಕೆ ಅಪಚಾರವೆಸಗಿದಂತಾಗಿದೆ. ಇಂತಹವರನ್ನು ಸಚಿವ ಸಂಪುಟದಿಂದ ಹೊರ ಹಾಕಿ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಸಚಿವರು ಕೆಟ್ಟದಾಗಿ ಮಾತನಾಡುವಾಗ ತಡೆದು ಬುದ್ಧಿ ಹೇಳುವ ಬದಲು ಸಂಸದ ಎಸ್.ಮುನಿಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಇನ್ನಿತರರು ಮೌನಕ್ಕೆ ಶರಣಾಗಿದ್ದು ಬೇಸರವನ್ನುಂಟು ಮಾಡಿದೆ ಎಂದರು.
ಕಾರ್ಯಕರ್ತರು ಸಚಿವರ ಪ್ರತಿಕೃತಿ ದಹನಕ್ಕೆ ಯತ್ನಿಸಿದಾಗ ಪೊಲೀಸರು ತಡೆದರು. ಮುಖಂಡರಾದ ಹುಲ್ಕೂರು ಹರಿಕುಮಾರ್, ಬಂಗವಾದಿ ನಾಗರಾಜ್, ಈಕಂಬಳ್ಳಿ ಮಂಜುನಾಥ್, ಅನುಶ್ರೀ, ಪವಿತ್ರಾ, ಕಾವ್ಯಾಂಜಲಿ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟಶಪ್ಪ, ವೇಣು, ಐತಾಂಡಹಳ್ಳಿ ಮಂಜುನಾಥ್, ನಾರಾಯಣ್, ನವೀನ್, ಮುರಳಿ ಇದ್ದರು.
ಮತ್ತೊಂದು ಗುಂಪು ಖಂಡನೆ: ಮಾಧುಸ್ವಾಮಿ ವರ್ತನೆ ಖಂಡಿಸಿ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣದ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಶಿವಸ್ವಾಮಿಗೆ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ನೀರಾವರಿ ಹೋರಾಟಗಾರರಾದ ಕುರುಬರಪೇಟೆ ವೆಂಕಟೇಶ್, ಚಿನ್ನಿ ಶ್ರೀನಿವಾಸ್, ಸುಧೀರ್, ತೇರಹಳ್ಳಿ ಚಂದ್ರಪ್ಪ, ದೊಡ್ಡಕುರುಬರಹಳ್ಳಿ ಶಂಕರ್ ಹಾಜರಿದ್ದರು.
ಲಘುವಾಗಿ ಮಾತನಾಡಬಾರದಿತ್ತು: ಘಟನೆ ಕುರಿತು ಕೃಷಿಕ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್ ಪತ್ರಿಕಾ ಹೇಳಿಕೆ ನೀಡಿ, ಕೃಷಿಕರ ಬಗ್ಗೆ ಗೌರವ ಹೊಂದಿದ್ದ ಹಾಗೂ ರೈತರ ಪರ ಹೋರಾಟ ಮಾಡಿ ಜನರ ಮನದಲ್ಲಿ ಇಂದಿಗೂ ನೆಲಸಿರುವ ದಿ.ಸಿ.ಭೈರೇಗೌಡ, ಪಿ.ವೆಂಕಟಗಿರಿಯಪ್ಪ ಅವರ ತವರು ಜಿಲ್ಲೆಗೆ ಬಂದು ರೈತ ಮಹಿಳೆ ಬಗ್ಗೆ ಸಚಿವ ಮಾಧುಸ್ವಾಮಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.