

ಉಡುಪಿ: ಕರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದರು.
ವ್ಯಾಕ್ಸಿನ್ ಬೋಗಸ್ ಎಂದಿರುವ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಮಾಧುಸ್ವಾಮಿ, ದೇಶದಲ್ಲಿ 80 ಕೋಟಿ ಜನಕ್ಕೆ ಉಚಿತ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ 2000 ಕೋಟಿ ರೂಪಾಯಿ ತೆಗೆದಿಟ್ಟಿದೆ. ಡಿಕೆಶಿ ಪಾಪದ ಮಾತಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಟೀಕೆ ಮಾಡುವುದನ್ನು ಮಾಡಿ ಅದು ನಿಮ್ಮ ಡ್ಯೂಟಿ ಎಂದು ಜರಿದರು.
ವಿರೋಧ ಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರು ಇಲ್ಲ. ನೈಸರ್ಗಿಕ ಆಪತ್ತಿನ ಕಾಲದಲ್ಲಿ ಎಲ್ಲವನ್ನು ಟೀಕೆ ಮಾಡಬಾರದು. ವ್ಯಾಕ್ಸಿನ್ ಉತ್ಪಾದನೆ ಮಾಡಲು ಕಂಪನಿಯವರಿಗೂ ಕಾಲಾವಕಾಶ ಬೇಕು. ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಗಿಯುತ್ತದೆ. ಇದು ಡಿಕೆಶಿ ಅವರ ಬದುಕಿನ ಪ್ರಶ್ನೆ ಹೀಗಾಗಿ ವಿರೋಧ ಮಾಡುತ್ತಾರೆಂದು ಕಿಡಿಕಾರಿದರು.
ಬಿಜೆಪಿಗೆ ಯಾರಾದರೂ ಬರುವುದಿದ್ದರೆ ಬರಲಿ. ಬೇರೆ ಪಕ್ಷದಿಂದ ಬಿಜೆಪಿಗೆ ಬರುವುದಾದರೆ ಸ್ವಾಗತ. ವಿಸ್ತರಣೆ ರಾಜಕೀಯ ಎಲ್ಲಾ ಪಕ್ಷಗಳ ಉದ್ದೇಶ ಆಗಿರುತ್ತದೆ. ಕಾಂಗ್ರೆಸ್ನಿಂದ ಯಾರಾದರೂ ಬರುವವರಿದ್ದರು ನಾವು ಸ್ವಾಗತಿಸುತ್ತೇವೆ ಎಂದು ಉಡುಪಿಯಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿಕೆ ನೀಡಿದರು. (ದಿಗ್ವಿಜಯ ನ್ಯೂಸ್)