

ಹನೂರು: ತಾಲೂಕಿನ ಸುಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಹೊಸಕೊಳದ ಸಮೀಪ ರಸ್ತೆ ಬದಿಯ ಕಸದ ರಾಶಿಯಲ್ಲಿ ಆನೆ ದಂತ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಸೋಮವಾರ ಕಸದ ತೊಟ್ಟಿ ಬಳಿ ಆನೆಯ ಒಂದು ದಂತ ಕಸದ ರಾಶಿಯೊಂದಿಗೆ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಂತವನ್ನು ವಶಕ್ಕೆ ಪಡೆದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ವಿಷಯವನ್ನು ಅರಣ್ಯಾಧಿಕಾರಿ ಏಡುಕೊಂಡಲು ಅವರು ಖಚಿತಪಡಿಸಿದ್ದು, ‘‘ಬೆಟ್ಟದಲ್ಲಿ ಆನೆ ದಂತ ಪತ್ತೆಯಾಗಿರುವ ಬಗ್ಗೆ ಈಗಾಗಲೇ ಅಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ’’ ಎಂದಿದ್ದಾರೆ.