ನಿವೃತ್ತಿ ಬದುಕಿನಲ್ಲಿ ಹೊಂದಾಣಿಕೆ ಇರಲಿ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ; ನಿವೃತ್ತ ನೌಕರರ ದಿನಾಚರಣೆ

26 c n hallI 1
Published on

ಚಿಕ್ಕನಾಯಕನಹಳ್ಳಿ : ನಿವೃತ್ತಿ ಎಂಬುದು ವೃತ್ತಿಗೇ ಹೊರತು ಮನಸ್ಸಿಗಲ್ಲ. ಮನಸ್ಸು ಖುಷಿಯಾಗಿದ್ದರೆ, ಅದಕ್ಕೆ ವಯಸ್ಸೇ ಆಗುವುದಿಲ್ಲ. ಸ್ವಾರ್ಥದಿಂದ ಆಸೆಗಳ ಬೆನ್ನು ಹತ್ತದೆ ನಿಮ್ಮ ನಿವೃತ್ತಿ ಬದುಕಿನಲ್ಲಿ ಎಲ್ಲರೊಂದಿಗೂ ಹೊಂದಾಣಿಕೆ ಸಾಧಿಸಿ, ಆಸ್ವಾದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ನಿವೃತ್ತ ನೌಕರರ ಸಂಘ ಭಾನುವಾರ ಏರ್ಪಡಿಸಿದ್ದ ನಿವೃತ್ತ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಾಧನೆಗೆ ಮನಸ್ಸು ಮೂಲವೇ ಹೊರತು ದೇಹವಲ್ಲ. ಮನಸ್ಸು ಸದಾ ಲವಲವಿಕೆಯಿಂದ ಇರುವಂತೆ ನೋಡಿಕೊಂಡರೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬದುಕನ್ನು ಸಂಧಾನ, ಹೊಂದಾಣಿಕೆ ಮೂಲಕ ಬದುಕಬೇಕು. ಅಂತೆಯೇ ಜೀವನದ ಅನುಭವ ಬರೆದಿಡಬೇಕು ಎಂದರು.

ಮಾನಸಿಕ ನೆಮ್ಮದಿಗಾಗಿ ಯೋಗ, ಧ್ಯಾನ ಮುಖ್ಯವಾದವು. ಮುಂದಿನ ಬದುಕನ್ನು ದುಗುಡದಿಂದ ಕಳೆಯದೆ ಆರೋಗ್ಯವಾದ ಜೀವನ ನಡೆಸಿ, ನೆಮ್ಮದಿ ಕಂಡುಕೊಳ್ಳಿ. ನಿಮ್ಮ ಅನುಭವವನ್ನು ಸಮಾಜಕ್ಕೆ ಧಾರೆಯೆರೆದು, ಎಲ್ಲವನ್ನೂ ಮರೆತು ನಗುನಗುತ್ತಾ ಬಾಳಿರಿ ಎಂದು ಸಲಹೆ ನೀಡಿದರು.

ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಬೇಕು. ಯುವಪೀಳಿಗೆ ದಾರಿತಪ್ಪುತ್ತಿದ್ದು, ಅಂಥವರನ್ನು ಸರಿದಾರಿಗೆ ತರುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಡಿ.ರುದ್ರಮುನಿ ಮಾತನಾಡಿ, ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಘದ ಕಟ್ಟಡ ಚಿಕ್ಕದಾಗಿದ್ದು, ಸಭೆಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಆದ್ದರಿಂದ ಸಂಘದ ಹಿಂಭಾಗದಲ್ಲಿರುವ ಜಾಗ ಬಿಟ್ಟುಕೊಟ್ಟು, ಕಟ್ಟಡ ಕಟ್ಟಲು 5 ಲಕ್ಷ ರೂಪಾಯಿ ಅನುದಾನ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

75 ವರ್ಷವಾದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸಾವಿತ್ರಿಮೂರ್ತಿ, ಜಿಲ್ಲಾ ಕೋಶಾಧ್ಯಕ್ಷ ನರಸಿಂಹಶೆಟ್ಟಿ, ತುರುವೇಕೆರೆ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿವಯ್ಯ, ಕೊರಟಗೆರೆಯ ಬಿ. ಹನುಮಂತರಾಯಪ್ಪ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ. ರೇಣುಕಸ್ವಾಮಿ ಇತರರು ಇದ್ದರು.

ಇಂದು ಶೈಕ್ಷಣಿಕ ಪ್ರಗತಿ ವೇಗ ಪಡೆದುಕೊಂಡಿದೆ. ನಗರ ಪ್ರದೇಶದ ಮಕ್ಕಳಿಗೆ ಎಲ್ಲ ಸವಲತ್ತುಗಳು ಸಿಗುತ್ತಿವೆ. ಆದರೆ ಗ್ರಾಮೀಣ ಮಕ್ಕಳಿಗೆ ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಂಥ ಮಕ್ಕಳಿಗೆ ನಾವು ನಮ್ಮ ಅನುಭವದ ಹಾಗೂ ನಮ್ಮಲ್ಲಿರುವ ಶಿಕ್ಷಣದ ಚಿಂತನೆಗಳನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ. ಡಾ. ಎಂ.ವಿ. ನಾಗರಾಜರಾವ್, ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net