

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಶಾಸಕ ಯು.ಟಿ.ಖಾದರ್ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಿದ ದಿನವೂ ಸೇರಿದಂತೆ ಕೆಲವು ದಿನಗಳಿಂದ ಐವನ್ ಜತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದು, ಸುರಕ್ಷತೆ ಹಿನ್ನೆಲೆಯಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಈ ಹಿನ್ನೆಲೆಯಲ್ಲಿ ನಿರ್ಧರಿತ ಕಾರ್ಯಕ್ರಮ ಮುಂದೂಡಲಾಗಿದೆ. ಜನರು ಸೇವೆಗೆ ದೂರವಾಣಿ ಕರೆ ಮಾಡಬಹುದು. ಐವನ್ ಜತೆ ಸಂಪರ್ಕ ಇದ್ದವರು ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡು ಬಂದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಖಾದರ್ ಟ್ವೀಟ್ ಮಾಡಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ಬಂಟ್ವಾಳದ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಆಪ್ತ ಸಹಾಯಕರು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪತ್ರಕರ್ತರು ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು. ರೋಗ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಹೊರಗಡೆ ಓಡಾಟ ನಿರ್ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಸೂಚಿಸಿದ್ದಾರೆ.
ಕುಟುಕಿದ ಬಿಜೆಪಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಿದಾಗ ಉಪಸ್ಥಿತರಿದ್ದ ಐವನ್ ಡಿಸೋಜ ಸೋಂಕಿಗೆ ಒಳಗಾಗಿದ್ದಾರೆ. ಜತೆಗಿದ್ದ ಇತರ ಕಾಂಗ್ರೆಸ್ ಮುಖಂಡರು ಅಂತರ ಕಾಯ್ದುಕೊಳ್ಳದೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲಿದ್ದ ಕೆಲವು ಕಾಂಗ್ರೆಸ್ ನಾಯಕರು ಯಾವಾಗ ಕ್ವಾರಂಟೈನ್‌ಗೆ ಒಳಗಾಗುತ್ತಾರೆ? ಇವರಿಗೆ ಈ ನೆಲದ ಕಾನೂನು ಅನ್ವಯವಾಗುವುದಿಲ್ಲವೆ? ಕ್ವಾರಂಟೈನ್ ನಿಯಮಗಳಿಂದ ಕಾಂಗ್ರೆಸ್ ನಾಯಕರಿಗೆ ವಿನಾಯಿತಿ ಇದೆಯೇ? ಎಂಬುದನ್ನು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.