ಮೂಲಗೇಣಿದಾರರಿಗೆ ಭೂಮಿ ಹಕ್ಕು ನೀಡಲು ಎಂಎಲ್‌ಸಿ ಐವನ್ ಒತ್ತಾಯ

ivan
Published on


ಮಂಗಳೂರು : ಮೂಲಗೇಣಿ ಪದ್ಧತಿ ರದ್ಧತಿಗೆ 2012ರ ಜುಲೈ 13ರಂದು ರಾಷ್ಟ್ರಪತಿ ಅಂಕಿತ ದೊರೆತಿದೆ. ಇದುವರೆಗೆ ತಾಲೂಕು ಕಚೇರಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ವಿಶೇಷ ಅಭಿಯೋಜಕರನ್ನು ನೇಮಕ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿ ಅಧಿವೇಶನದ ಶೂನ್ಯ ವೇಳೆಯಲ್ಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಮೂಲಗೇಣಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕಾಯ್ದೆ ಜಾರಿಯಾಗಿ 12 ವರ್ಷ ಕಳೆದರೂ ಇನ್ನೂ ನ್ಯಾಯ ದೊರೆತಿಲ್ಲ. ಕರ್ನಾಟಕ ಹೈಕೋರ್ಟ್‌ನಲ್ಲಿ ಮೂಲಗೇಣಿ ಪರವಾಗಿ ತೀರ್ಪು ಬಂದಿದೆ. ಮೂಲಿದಾರರು ಅಪೀಲು ಸಲ್ಲಿಸುವ ಮೂಲಕ ಮೂಲಗೇಣಿದಾರರಿಗೆ ತೊಂದರೆ ನೀಡುತ್ತಿದ್ದಾರೆ. ಪೋಲಿಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯೋಜಕರನ್ನು ನೇಮಕ ಮಾಡಬೇಕು. ಮೂಲಗೇಣಿದಾರರು ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಂಡು ಅವರಿಗೆ ಭೂಮಿ ಹಕ್ಕು ನೀಡಬೇಕೆಂದು ಕಂದಾಯ ಸಚಿವರನ್ನು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net