ಬೈರಗೊಂಡ್ಲು ಡ್ಯಾಂ ನಿರ್ಮಿಸಿದರೆ ಮಾತ್ರ ಭೂಮಿ : ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿಕೆ ; ಕರೊನಾ ಮೃತರ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ

11 MDG 03 TUMUL photo
Published on

ಮಧುಗಿರಿ : ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಎತ್ತಿನಹೊಳೆ ಯೋಜನೆಯಲ್ಲಿ ಡ್ಯಾಂ ನಿರ್ಮಾಣ ಮಾಡದಿದ್ದಲ್ಲಿ ಕಾಮಗಾರಿಗೆ ಮಠದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ತುಮುಲ್ ಉಪಕೇಂದ್ರದಲ್ಲಿ ತುಮುಲ್ ಕಲ್ಯಾಣ ಟ್ರಸ್ಟ್ ಮತ್ತು ತುಮಕೂರು ಹಾಲು ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಕರೊನಾ ಮೃತರ ಕುಟುಂಬಗಳಿಗೆ ಪರಿಹಾರಧನ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೈಪ್‌ಲೈನ್ ಮಠದ ಜಮೀನಿನ ಮೂಲಕವೇ ಹಾದು ಹೋಗಲಿದೆ. ಒಂದು ವೇಳೆ ಬೈರಗೊಂಡ್ಲು ಬಳಿ ಡ್ಯಾಂ ನಿರ್ಮಿಸದಿದ್ದಲ್ಲಿ ಮಠದ ಜಮೀನು ನೀಡಲ್ಲ ಎಂದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಸರ್ಕಾರವಿದ್ದಾಗ ಎತ್ತಿನ ಹೊಳೆ ಯೋಜನೆ ಜಾರಿಗೆ ತಂದು 13,500 ಕೋಟಿ ರೂಪಾಯಿ ಮೀಸಲಿರಿಸಿ, ಬೈರಗೊಂಡ್ಲು ಬಳಿ ಡ್ಯಾಂ ನಿರ್ಮಾಣ ಮಾಡಿ 5 ಟಿಎಂಸಿ ನೀರು ಹರಿಸಲು ತೀರ್ಮಾನಿಸಲಾಗಿತ್ತು ಎಂದರು.

ಯೋಜನೆಗೆ ದೊಡ್ಡಬಳ್ಳಾಪುರ ರೈತರಿಂದ 2500 ಎಕರೆ, ಕೊರಟಗೆರೆ ರೈತರಿಂದ 2500 ಸೇರಿ ಒಟ್ಟು 5 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಈಗ ಇದರಲ್ಲೂ ರಾಜಕೀಯ ಬೆರೆಸಿದ್ದು, ದೊಡ್ಡಬಳ್ಳಾಪುರ ರೈತರಿಗೆ ಎಕರೆಗೆ 32 ಲಕ್ಷ ರೂಪಾಯಿ ನಿಗದಿ ಮಾಡಿದ್ದು, ಕೊರಟಗೆರೆ ತಾಲೂಕಿನ ರೈತರ ಜಮೀನಿಗೆ ಎಕರೆಗೆ ಕೇವಲ 8 ರಿಂದ 10 ಲಕ್ಷ ಹಣ ನಿಗದಿ ಮಾಡಲಾಗಿದೆ. ಇದರಿಂದ ನಮ್ಮ ಭಾಗದ ರೈತರಿಗೆ ಅನ್ಯಾಯವಾಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಬೈರಗೊಂಡು ಬಳಿ ಡ್ಯಾಂ ನಿರ್ಮಾಣವನ್ನೇ ಕೈ ಬಿಡುವ ಚಿಂತನೆ ನಡೆಸುತ್ತಿದೆ. ಇಂತಹ ಕೀಳು ಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ. ಯೋಜನೆಗೆ 5 ಹಳ್ಳಿಗಳನ್ನು ಸ್ಥಳಾಂತರಿಸಬೇಕಿದ್ದು, ಸರ್ಕಾರ ಎಚ್ಚರಿಕೆಯ ಹೆಜ್ಜೆಯಿಡಬೇಕು ಎಂದರು.

ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲು ಶಾಸಕ ಪರಮೇಶ್ವರ್ ಕಾರಣ. ಎತ್ತಿನ ಹೊಳೆ ಯೋಜನೆಯ ಕಾಮಗಾರಿಯಿಂದಾಗಿ ತಾಲೂಕಿನ 54 ಕೆರೆಗಳಿಗೆ ನೀರು ಹರಿಯಲಿದ್ದು, ಇದನ್ನು ಭಾಗ ಮಾಡಿ 84 ಕೆರೆಗಳಿಗೆ ಹರಿಸುವ ಪ್ರಸ್ತಾಪವನ್ನು ಸಚಿವ ಮಾಧುಸ್ವಾಮಿ ಸರ್ಕಾರದ ಮುಂದಿಟ್ಟಿದ್ದಾರೆ ಎಂದರು.

ತುಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಿ ಮತ್ತು ಎತ್ತಿನಹೊಳೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕಾರ್ಯಕ್ರಮದಲ್ಲಿ ಗಮನಸೆಳೆದರು. ಜಿಪಂ ಸದಸ್ಯ ಕೆಂಚಮಾರಯ್ಯ, ತುಮುಲ್ ಅಧ್ಯಕ್ಷ ಸಿ.ವಿ. ಮಹಲಿಂಗಯ್ಯ, ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್, ಉಪವ್ಯವಸ್ಥಾಪಕ ವೀರಣ್ಣ, ಕೆಎಂಎಫ್ ನಿರ್ದೇಶಕ ಪ್ರಕಾಶ್, ತುಮುಲ್ ನಿರ್ದೇಶಕರಾದ ಹಳೇಮನೆ ಶಿವನಂಜಪ್ಪ, ಚಂದ್ರಶೇಖರ್, ರೇಣುಕಾಪ್ರಸಾದ್, ಈಶ್ವರಪ್ಪ, ಚನ್ನಮಲ್ಲಪ್ಪ, ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ.ಆರ್. ಜಗನ್ನಾಥ್, ಎಂ.ಎಸ್. ಚಂದ್ರಶೇಖರ್, ಚಂದ್ರಶೇಖರ್ ಬಾಬು, ನರಸಿಂಹಮೂರ್ತಿ, ಮುಖಂಡರಾದ ಎಂ.ಜಿ. ಶ್ರೀನಿವಾಸ ಮೂರ್ತಿ, ಸುಮುಖ್ ಕೊಂಡವಾಡಿ, ವಿಸ್ತರಣಾಧಿಕಾರಿಗಳಾದ ಶಂಕರ್‌ನಾಗ್, ಗಿರೀಶ್, ಡಾ. ದೀಕ್ಷಿತ್, ಸಹಾಯಕ ವ್ಯವಸ್ಥಾಪಕ ರವಿಕಿರಣ್ ಇತರರಿದ್ದರು.

ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿಸಬೇಕು. ಮಧುಗಿರಿ ಉಪವಿಭಾಗದ ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ ತಾಲೂಕುಗಳು ಬರಪಿಡಿತ ಪ್ರದೇಶಗಳಾಗಿದ್ದು, ಮಧುಗಿರಿ ಜಿಲ್ಲೆಯಾದಾಗ ಮಾತ್ರ ಈ ಭಾಗಗಳ ಅಭಿವದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲಾ ಸರ್ಕಾರವನ್ನು ಒತ್ತಾಯಿಸಬೇಕು. ಡಾ.ಜಿ.ಪರಮೇಶ್ವರ್, ಶಾಸಕ ಕುಮಾರಸ್ವಾಮಿ ಸರ್ಕಾರದಲ್ಲಿ ಜಾರಿಗೆ ತಂದ ಸಾಲ ಮನ್ನಾ ಯೋಜನೆಯಿಂದ ಬಹಳಷ್ಟು ರೈತರು ಸಂಕಷ್ಟದಿಂದ ಪಾರಾಗಿದ್ದಾರೆ. ಮಧುಗಿರಿಯನ್ನು ಜಿಲ್ಲೆಯನ್ನಾಗಿಸಲು ನಾನೂ ಕೈ ಜೋಡಿಸುತ್ತೇನೆ. ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡೋಣ. ಹನುಮಂತನಾಥ ಸ್ವಾಮೀಜಿ, ಎಲೆರಾಂಪುರ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net