ಮಧುರೆ ಕೆರೆಗೆ ಬಾಗಿನ ಅರ್ಪಿಸಲೂ ಪರದಾಟ : ಜಾಲಿಮರಗಳಿಂದ ಅಡೆತಡೆ

madure bagina
Published on

ವಿಜಯವಾಣಿ ಸುದ್ದಿಜಾಲ ಮಧುರೆ
ಬರೋಬ್ಬರಿ 30 ವರ್ಷದ ಬಳಿಕ ತುಂಬಿ ಕೋಡಿ ಹರಿದು ದೊಡ್ಡಬಳ್ಳಾಪುರ ತಾಲೂಕು ಮಧುರೆ ಕೆರೆಗೆ ಬಾಗಿನ ಅರ್ಪಿಸಲು ಮುಂದಾದ ಸ್ಥಳೀಯ ಮುಖಂಡರು ಬಾಗಿನ ಅರ್ಪಿಸಲು ಸೂಕ್ತ ಸ್ಥಳಕ್ಕಾಗಿ ಪರದಾಡಬೇಕಾಯಿತು.
ನೂರಾರು ಎಕರೆ ವಿಸ್ತೀರ್ಣದ ಕೆರೆ ತುಂಬ ಜಾಲಿಮರ ಬೆಳೆದಿದ್ದು, ಕೆರೆಯ ಸ್ವರೂಪವನ್ನೇ ಹಾಳುಗೆಡವಿದೆ. ಇನ್ನು ಕೆರೆಯ ಸುತ್ತಲ ಪ್ರದೇಶದಲ್ಲಿ ಜಾಲಿಗಿಡಗಳೊಂದಿಗೆ ಗಿಡಗಂಟಿ ಆವರಿಸಿಕೊಂಡಿದ್ದು, ಬಾಗಿನ ಅರ್ಪಿಸಲು ಸೂಕ್ತ ಸ್ಥಳವೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ರಸ್ತೆಯ ಉದ್ದಕ್ಕೂ ಮಾಂಸದಂಗಡಿ, ಕೋಳಿ ವ್ಯಾಪಾರಿಗಳು ಹಾಗೂ ಕೆಲವು ಹೋಟೆಲ್ ಉದ್ಯಮಿಗಳು ತ್ಯಾಜ್ಯ ತಂದು ಕೆರೆಯ ಬದಿಯಲ್ಲಿ ಸುರಿಯುತ್ತಿರುವುದರಿಂದ ಕೆರೆಯ ಸೊಬಗನ್ನು ವೀಕ್ಷಿಸಲು ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.


ಜಾರಿ ಬಿದ್ದರೆ ಜೋಕೆ: ಕೆರೆ ಸುತ್ತ ಗಿಡಗಂಟಿ ಬೆಳೆದಿರುವುದರಿಂದ ಗಂಗಾಮಾತೆಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲು ಬಂದವರು ಜಾರಿಬಿದ್ದೀರಿ ಜೋಕೆ ಎಂದು ಹೆಳುತ್ತಲೇ ಒಬ್ಬರ ಕೈ ಮತ್ತೊಬ್ಬರು ಹಿಡಿದುಕೊಂಡು ಸಾಕಷ್ಟು ಕಸರತ್ತು ನಡೆಸಿದ ದೃಶ್ಯ ಕಂಡುಬಂತು.


ಧನ್ಯತಾ ಭಾವ ಅರ್ಪಣೆ: ರಾಜ್ಯದೆಲ್ಲೆಡೆ ಅಬ್ಬರಿಸುತ್ತಿರುವ ಮಳೆರಾಯ ಗ್ರಾಮಾಂತರ ಜಿಲ್ಲೆಯಲ್ಲೂ ಪ್ರತಾಪ ತೋರಿಸುತ್ತಿದ್ದರು ದಶಕಗಳ ಕಾಲ ನೀರಿನ ಪಸೆಯನ್ನೇ ಕಾಣದ ಅದೆಷ್ಟೋ ಕೆರೆಗಳಲ್ಲಿ ಈ ಬಾರಿ ಜೀವಕಳೆ ಮರುಕಳಿಸಿದೆ, ಇವುಗಳ ಪೈಕಿ ಮಧುರೆ ಕೆರೆಯೂ ಒಂದಾಗಿದ್ದು, ಸ್ಥಳೀಯರು ಸಂತಸ ಸಡಗರದಿಂದ ಗಂಗಾಮಾತೆಗೆ ಬಾಗಿನ ಅರ್ಪಿಸಿ ಧನ್ಯಾತಾಭಾವ ಪ್ರದರ್ಶಿಸಿದರು.


ರೈತ ಬಂಧುಗಳಿಗೆ ಸಂತಸ: ಉತ್ತಮ ಮಳೆಯಾಗುತ್ತಿದ್ದು, 30 ವರ್ಷದ ಬಳಿಕ ಪುರಾತನವಾದ ಮಧುರೆ ಕೆರೆ ತುಂಬಿ ಕೋಡಿ ಹರಿದಿದೆ, ಇದರಿಂದ ಸುತ್ತಮುತ್ತಲ ಭಾಗದ ರೈತ ಬಂಧುಗಳು ಸಂತಸಗೊಂಡಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಹೇಳಿದರು.


ಕೆರೆಗಳು ತುಂಬಿ ಕೋಡಿ ಹರಿದರೆ ಕೆರೆ ಸುತ್ತಮುತ್ತಲ ಭಾಗದ ಗ್ರಾಮಗಳು ಸುಭಿಕ್ಷವಾದಂತೆ ಎಂದು ಬಿಜೆಪಿ ಮುಖಂಡ ವಿರುಪಾಕ್ಷಯ್ಯ ಹೇಳಿದರು. ವರುಣ ದೇವ ಕೃಪೆ ತೋರಿರುವುದರಿಂದ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದೆ, ಬತ್ತಿಹೋಗಿದ್ದ ಕೊಳವೆಬಾವಿಗಳೂ ರೀಚಾರ್ಚ್ ಆಗಿವೆ, ಈ ವೇಳೆ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.

ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರವಿರುವ ಮಧುರೆಯ ಶ್ರೀ ಶನಿಮಹಾತ್ಮ ದೇಗುಲಕ್ಕೆ ಹೊಂದಿಕೊಂಡಂತಿರುವ ಮಧುರೆ ಕೆರೆ ಅಭಿವೃದ್ಧಿಯನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ, ಇಡೀ ಕೆರೆ ಒಡಲು ಜಾಲಿಮರ, ಗಿಡಗಂಟಿಗಳಿಂದ ಆವೃತವಾಗಿದೆ. ಈ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಸುಂದರ ಪ್ರೇಕ್ಷಣೀಯ ಸ್ಥಳವಾಗಲಿದೆ.
ಅನಿಲ್‌ಕುಮಾರ್
ಬಿಜೆಪಿ ಅಧ್ಯಕ್ಷ ಮಧುರೆ ಹೋಬಳಿ

ಮೂವತ್ತು ವರ್ಷದ ಬಳಿಕ ಕೆರೆ ತುಂಬಿ ಕೋಡಿ ಬಿದ್ದಿರುವುದನ್ನು ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿರುವುದು ನಮ್ಮ ಅದೃಷ್ಟ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಲಮೂಲಗಳ ರಕ್ಷಣೆಗೆ ಕಾಳಜಿವಹಿಸಬೇಕು.
ವಿಜಿಕುಮಾರ್
ಮಧುರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net