ಸಿದ್ದರಾಮಯ್ಯ ಗೇಮ್ ಪ್ಲ್ಯಾನ್

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯ ವಿಚಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಾಬಲ್ಯವನ್ನು ಕಡಿಮೆ ಮಾಡಿ, ತಮ್ಮ ಬಳಿಯೇ ಪವರ್ ಸೆಂಟರ್ ಇರಬೇಕು ಎಂಬುದು ಸಿದ್ದರಾಮಯ್ಯ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಡಿ.ಕೆ. ಶಿವಕುಮಾರ ವಿರುದ್ಧ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಬಲೆ ಹೆಣೆದಿದ್ದಾರೆ. ಎಲ್ಲ ಪ್ರಮುಖ ತೀರ್ವನಗಳನ್ನು ಅವರೇ ಮಾಡುತ್ತಿದ್ದಾರೆ. ಮೇಲ್ನೋಟಕ್ಕಷ್ಟೆ ರ್ಚಚಿಸಿ ತೀರ್ಮಾನ ಎಂಬಂತೆ ತೋರ್ಪಡಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಹೇಳಿಕೆಗೆ ಬದ್ಧ:

ರಾಜ್ಯದಲ್ಲಿ ಕಾಂಗ್ರೆಸ್ ಐಸಿಸ್ ಮಾದರಿ, ತಾಲಿಬಾನ್ ಆಡಳಿತ ನಡೆಸಿದ್ದಾರೆ ಎಂಬ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ಸಿಗರು ಎಷ್ಟೇ ಬೇಕಾದರೂ ಪ್ರತಿಭಟನೆ ನಡೆಸಲಿ. ನಾವು ಪ್ರತಿಭಟನೆ ನಡೆಸಿದ್ದಕ್ಕೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ಕಾಂಗ್ರೆಸ್ಸಿಗರೇ ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಮಾಡಿದವರು ಕಾಂಗ್ರೆಸ್​ನವರ ಪ್ರಕಾರ ಅಮಾಯಕರು, ಡಿಜೆ ಹಳ್ಳಿ- ಕೆಜೆ ಹಳ್ಳಿಯಲ್ಲಿ ಗಲಾಟೆ ಮಾಡಿದವರು ಮತ್ತು ಪಿಎಫ್​ಐ ಕಾರ್ಯಕರ್ತರು ಇವರಿಗೆ ಅಮಾಯಕರಂತೆ ಕಾಣುತ್ತಾರೆ. ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದವರು ಇವರಿಗೆ ಸಹೋದರರು. ಹೀಗಾಗಿ, ಇವರದ್ದು ಐಸಿಸ್ ಮಾದರಿ ಆಡಳಿತ ಎಂದು ಹೇಳದೆ ಮತ್ತೆ ಏನನ್ನಬೇಕು ಎಂದು ಜೋಶಿ ಕಿಡಿ ಕಾರಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿದೆ. ರಾಜ್ಯ ಸರ್ಕಾರ ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ. ಚುನಾವಣೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಈಗ ತಮ್ಮ ಅಕ್ಕಿ ತಗೆದುಕೊಂಡು ಬಿಜೆಪಿಯವರು ಮಂತ್ರಾಕ್ಷತೆ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಟೀಕಿಸಿದರು.

ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾವು ಏನೂ ಹೇಳುವುದಿಲ್ಲ. ಕಾನೂನು ಹೋರಾಟ ಏನೇ ಇದ್ದರೂ ಅದಕ್ಕೆ ಸಂಬಂಧಿಸಿದವರು ಮಾಡುತ್ತಾರೆ ಎಂದು ಸಚಿವ ಜೋಶಿ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net