

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯಿಂದ ಅನುಮತಿ ಪಡೆದುಕೊಂಡು 2015ರಿಂದ ಫ್ರಾಂಚೈಸಿ ಆಧಾರಿತ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್ಪಿಎಲ್) ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಿಕೊಂಡು ಬಂದಿದ್ದೇವೆ. ಇದಕ್ಕೆ ಪ್ರತಿ ಆಟಗಾರರಿಂದ ಹಾಗೂ ತಂಡದ ಮಾಲೀಕರಿಂದ ಹಣ ಸಂಗ್ರಹಿಸಿದ್ದು ನಮ್ಮ ನಿರ್ಧಾರವಾಗಿದೆ ಎಂದು ಟೂರ್ನಾಮೆಂಟ್ ಆಯೋಜಕರಾದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ನ ಟ್ರಸ್ಟಿ ಬಾಬಾ ಭೂಸದ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್ಪಿಎಲ್ನ ಆಯೋಜಕರು ನಾವು. ಅದರ ನಿರ್ವಹಣೆಗೆ ಹಣ ಸಂಗ್ರಹಣೆ ವಿಷಯದಲ್ಲಿ ಕೆಎಸ್ಸಿಎ ಪಾತ್ರವಿಲ್ಲ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಎಚ್ಪಿಎಲ್ನಲ್ಲಿ ಪ್ರತಿ ಆಟಗಾರರಿಂದ 800 ರೂ. ಹಾಗೂ ಪ್ರತಿ ತಂಡದಿಂದ 55 ಸಾವಿರ ರೂ. (ಒಟ್ಟು 6 ತಂಡಗಳು) ಹಣ ಸಂಗ್ರಹಿಸಿದ್ದೇವೆ. ಆಟಗಾರರ ಹರಾಜು ಪ್ರಕ್ರಿಯೆ, ಮೈದಾನದ ಶುಲ್ಕ, ಪಂದ್ಯದ ಅಧಿಕಾರಿಗಳ ಡ್ರೆಸ್, ಇತರರ ಖರ್ಚು-ವೆಚ್ಚಗಳಿಗೆ ಹಣದ ಅಗತ್ಯವಿರುತ್ತದೆ ಎಂದು ಹೇಳಿದರು.
ಎಚ್ಪಿಎಲ್ ಆಯೋಜನೆ ಪೂರ್ವ ಕೆಎಸ್ಸಿಎ ಜತೆ ಸಂಲಗ್ನತೆ ಹೊಂದಿರುವ ಕ್ಲಬ್ಗಳಿಗೆ ಆಟಗಾರರ ಪಟ್ಟಿ ಕಳುಹಿಸಲು ಹೇಳಲಾಗುತ್ತದೆ. ಅವರು ಕೊಟ್ಟ ಪಟ್ಟಿ ಪ್ರಕಾರ ಆಟಗಾರರರನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಆಯ್ಕೆಯಾಗದ ಪ್ರತಿ ಆಟಗಾರರಿಗೆ 400 ರೂ. ವಾಪಸ್ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಈ ಬಾರಿ ಎಚ್ಪಿಎಲ್ ಆಯೋಜನೆಗಾಗಿ ಮೈದಾನದ ಶುಲ್ಕವಾಗಿ ಕೆಎಸ್ಸಿಎಗೆ ಆಗಸ್ಟ್ನಲ್ಲಿ 40 ಸಾವಿರ ರೂ. ಪಾವತಿಸಿದ್ದೇವೆ. ಮುಂಗಡವಾಗಿ ಶುಲ್ಕ ಪಾವತಿಸಲು ಕೆಎಸ್ಸಿಎನವರು ಹೇಳಿರಲಿಲ್ಲ. ಆಗಸ್ಟ್ನಲ್ಲಿ ಕೇಳಿದ್ದರು, ಕೆಲ ದಿನಗಳಲ್ಲಿ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಿದ್ದೇವೆ. ಈ ವಿಷಯದಲ್ಲಿ ಲೋಪವಾಗಿದ್ದರೆ ನಮ್ಮ ಕ್ಲಬ್ (ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್) ಕೆಎಸ್ಸಿಎ ನಿಂದ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ ಎಂದರು.