ಬಾಗಿಲು ತೆರೆಯದೇ 5 ವರ್ಷ ಆಯ್ತು!

4 hos (4)
ಟಾರ್ಪಲ್ ಹಾಕಿ ಮುಚ್ಚಿರುವ ಹೊಸನಗರ ಗುರುಭವನ.
Published on

ಹೊಸನಗರ: ಮೂರು ದಶಕಗಳ ಹಿಂದೆ ನಿರ್ಮಾಣಗೊಂಡ ಗುರುಭವನ ಇಂದು ಉಪಯೋಗಕ್ಕೆ ಬಾರದೆ ಪಾಳುಬಿದ್ದ ಕಟ್ಟಡವಾಗಿ ಹೊರಹೊಮ್ಮಿದೆ.
1991ರಲ್ಲಿ ಅಂದಿನ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅವಿರತ ಶ್ರಮದಿಂದಾಗಿ ನಿರ್ಮಾಣಗೊಂಡಿದ್ದು ಈ ಗುರುಭವನ. ಆಗಲೇ ಅಂದಾಜು 10 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಪಟ್ಟಣದ ಮಾರಿಗುಡ್ಡದ ಶಿಕ್ಷಣಾಧಿಕಾರಿಗಳ ಕಚೇರಿ ಸನಿಹದಲ್ಲೇ ಗುರುಭವನ ಮೈದಳೆದ ಕಾರಣ ಶಿಕ್ಷಕರ ಮತ್ತು ಶಿಕ್ಷಣ ಇಲಾಖೆಯ ಕಾರ್ಯ ಚಟುವಟಿಕೆಗೆ ಪೂರಕವಾಗಿತ್ತು. ಅಲ್ಲದೇ ಶಿಕ್ಷಕರ ದಿನಾಚರಣೆ ಕೂಡ ಗುರುಭವನದಲ್ಲೇ ನಡೆಯುತ್ತಿತ್ತು. ಆದರೆ ಬರಬರುತ್ತ ಶಿಥಿಲಗೊಂಡ ಹಿನ್ನೆಲೆ ಪ್ರಯೋಜನಕ್ಕೆ ಬಾರದಂತಾಗಿದೆ.
ನೀರು, ಶೌಚಗೃಹ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಮತ್ತು ಸಿಮೆಂಟ್ ಹೊದಿಸಿದ ಕಟ್ಟಡ ಸಂಪೂರ್ಣ ಸೋರುತ್ತಿದ್ದು ಶಿಥಿಲಗೊಂಡ ಹಿನ್ನೆಲೆಯಲ್ಲಿ 5 ವರ್ಷದಿಂದ ಬಾಗಿಲು ಹಾಕಲಾಗಿದೆ. ತಾಲೂಕಿನಲ್ಲಿ 150 ಶಿಕ್ಷಕರಿದ್ದ ಕಾಲದಲ್ಲಿ ನಿರ್ಮಾಣಗೊಂಡ ಗುರುಭವನ ಇದು. ಪ್ರಸ್ತುತ 483 ಶಿಕ್ಷಕರು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಗುರುಭವನ ಲಭ್ಯ ಇಲ್ಲದ ಕಾರಣ ಖಾಸಗಿ ಕಟ್ಟಡದಲ್ಲಿ ಶಿಕ್ಷಕರ ದಿನಾಚರಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಾರಿಗುಡ್ಡದಲ್ಲಿ ಗುರುಭವನಕ್ಕೆ ಸೇರಿದ 70*170 ಅಳತೆಯ ವಿಶಾಲ ಜಾಗವಿದ್ದು ಈ ಜಾಗದಲ್ಲಿ ನಿರ್ಮಾಣಗೊಂಡ ಗುರುಭವನ ಎಷ್ಟೊಂದು ಹದಗೆಟ್ಟಿದೆ ಎಂದರೆ ಟಾರ್ಪಲ್ ಹೊದಿಕೆಯೊಂದಿಗೆ ಗುರುಭವನವನ್ನು ಮುಚ್ಚಲಾಗಿದೆ.
ಈ ಹಿಂದೆ ಜಿಪಂ ಅನುದಾನ ಮತ್ತು ಶಿಕ್ಷಕರೇ ಕೈಯಿಂದ ಹಣ ಹಾಕಿ 60 ಅಡಿ ಆಳದ ಬಾವಿ ತೋಡಿಸಿದ್ದಾರೆ. ಆದರೆ ದುರದೃಷ್ಟಕ್ಕೇ ಬಾವಿಯಲ್ಲಿ ನೀರೇ ಇಲ್ಲ. ಇನ್ನು ಶಿಕ್ಷಕರೇ ಸ್ವಂತ ಖರ್ಚಿನ ಮೂಲಕ ಕಾಂಪೌಂಡ್ ನಿರ್ಮಿಸಿದ್ದು ಒತ್ತುವರಿಯಿಂದ ಜಾಗವನ್ನು ಮಾತ್ರ ಕಾಪಾಡಿಕೊಂಡಿದ್ದಾರೆ.
ಸರ್ಕಾರದ ಅಂಗವಾಗಿ ಕಾರ್ಯನಿರ್ವಹಿಸುವ ಶಿಕ್ಷಕರ ಅಗತ್ಯಗಳಿಗೆ ಬೇಕಾದ ಗುರುಭವನ ದುರಸ್ತ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಕೊಟ್ಟ ಮನವಿಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ತಾಲೂಕು ವಿಸ್ತೀರ್ಣ ದೊಡ್ಡದಾಗಿದ್ದು ದೂರದೂರಿನಿಂದ ಬರುವ ಶಿಕ್ಷಕರಿಗೆ ಆಸರೆಯಾಗಬೇಕಿದ್ದ ಗುರುಭವನ ಇತಿಹಾಸದ ಪಳೆಯುಳಿಕೆಯಂತೆ ದೂರದಿಂದ ವೀಕ್ಷಣೆಗೆ ಮಾತ್ರ ಸೀಮಿತವಾಗಿದೆ. ಮಾತ್ರವಲ್ಲ ಶಿಕ್ಷಕರನ್ನೇ ತಲೆತಗ್ಗಿಸುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net