

ರಾಯಚೂರು 2009 ರ ಅವಧಿಯಲ್ಲಿ ಜಿಲ್ಲೆಯಲ್ಲಿ ಭೀಕರ ನೆರೆ ಪ್ರವಾಹದಿಂದ ತತ್ತರಿಸಿದ ಅನೇಕ ಗ್ರಾಮಗಳಿಗೆ ಮನೆಗಳ ನಿರ್ಮಾಣ ಮಾಡಿ 16 ವರ್ಷ ಕಳೆದರು ಜಿಲ್ಲಾಡಳಿತದಿಂದ ಮೂಲಭೂತ ಸೌಕರ್ಯ ಕಲ್ಪಿಸಲಾಗದೆ ಇರುವುದರಿಂದ ಮನೆಗಳೇಲ್ಲ ಹಾಳು ಬಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ನೆರೆ ಪ್ರವಾಹದ ಸಂದರ್ಭದಲ್ಲಿ ತುಂಗಾಭದ್ರ ನದಿ ಪಾತ್ರದಲ್ಲಿನ ರಾಯಚೂರು ತಾಲೂಕಿನ ತಲಮಾರಿ, ಮಿರ್ಜಾಪುರ, ಎಲ್ಲೆ ಬಿಚ್ಚಲಿ,ಹನುಮಪುರು,ಮಾನ್ವಿ ತಾಲೂಕಿನ ಜೂಕೂರು ಹಾಗೂ ಕೃಷ್ಣಾ ನದಿ ಪಾತ್ರದ ದೇವದುರ್ಗ ತಾಲೂಕಿನ ಮದರಕಲ್, ಕೋಳೂರು,ಚಿಕ್ಕ ಕೂಡಲಿಗಿ, ಅಪ್ರಾಳ ಗ್ರಾಮಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಸಿಸ್ಕೋ,ಶಿಲ್ಪಾ, ಇನ್ಫೋಸಿಸ್ ಎನ್‌ಜಿಓ ಕಂಪನಿಗಳ ನೆರವಿನಿಂದ ಒಂದು ಗ್ರಾಮದಲ್ಲಿ 800 ಮನೆಗಳಂತೆ ಸುಮಾರು 7200 ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಸರ್ಕಾರವಾಗಲಿ, ಜಿಲ್ಲಾಡಳಿತ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಸ್ಥಳಾಂತರವಾದ ಗ್ರಾಮಗಳಲ್ಲಿ ಮನೆಗಳು ಹಾಳು ಕೊಂಪೆಯಾಗಿವೆ.
ಮೂಲಭೂತ ಸೌಲಭ್ಯ ಮರಿಚಿಕೆ
2009ರ ಭೀಕರ ಪ್ರವಾಹದಿಂದ ಜಿಲ್ಲೆಯ ಅನೇಕ ಗ್ರಾಮಗಳು ಸಂಪೂರ್ಣ ಜಲಾವತವಾಗಿ ಅಪಾರ ಪ್ರಮಾಣದ ಹಾನಿಯ ಜತೆಗೆ ಜೀವ ಹಾನಿಯೂ ಸಂಭವಿಸಿದ್ದು, ಅಂದಿನ ರಾಜ್ಯ ಸರ್ಕಾರ ಈ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಿ ದಾನಿಗಳ ಸಹಾಯದಿಂದ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಿತ್ತು. ಅದರಂತೆ ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ಸಿಸ್ಕೋ ಕಂಪನಿಯು ಒಂದು ಮನೆಗೆ 2 ಲಕ್ಷ ರೂ. ವೆಚ್ಚದಲ್ಲಿ ಸಮಾರು 3000 ಮನೆಗಳ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು ಸರ್ಕಾರ ಸೂಚಿಸಿದ 106 ಎಕರೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದರು. ಆದರೆ ಇದುವರೆಗೆ ಜಿಲ್ಲಾಡತಕ್ಕೆ ಮನೆಗಳು ಸಿಸ್ಕೋ ಕಂಪನಿ ಹಸ್ತಾಂತರಿಸಿ ಸುಮಾರು 16 ವರ್ಷಗಳು ಕಳೆದಿದ್ದು, ಇಲ್ಲಿಯವರೆಗೂ ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಜನರು ಅಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ.
ಕೆಲವೇ ಕುಟುಂಬಗಳು ವಾಸ ?
ರಾಜ್ಯ ಸರ್ಕಾರದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಮನೆಗಳನ್ನು ನಿರ್ಮಾಣ ಮಾಡಿ ನೆರೆ ಸಂತ್ರಸ್ಥರಿಗೆ ನೀಡಿದ್ದರು.ಆದರೆ ಸರಿಯಾದ ಮೂಲಭೂತ ಸೌಲಭ್ಯ ನೀಡದೆ ಇರುವುದರಿಂದ ಗ್ರಾಮಗಳಲ್ಲಿರುವ ಕೆಲವೇ ನಿರ್ಗತಿಕ ಕುಟುಂಬಗಳು ಮಾತ್ರ ವಾಸ ಮಾಡುತ್ತಿದ್ದಾರೆ.
ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಮನೆಗಳ ಬಾಗಿಲು, ಕಿಟಕಿಗಳೆಲ್ಲ ಕಳ್ಳತನವಾಗಿದ್ದು, ಸಂಜೆಯಾದರೆ ಅನೈತಿಕ ಚಟುವಟಿಗಳು ನಡೆಯುತ್ತಿವೆ. ಈ ಆಶ್ರಯ ಯೋಜನೆಯಲ್ಲಿ ದಾನಿಗಳಿಂದ ನಿರ್ಮಿಸಲಾದ ಮನೆಗಳಿಗೆ ಜಿಲ್ಲಾಡಳಿತ ಇಲ್ಲಿಯವರೆಗೂ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎನ್ನುವ ಏಕೈಕ ಉದ್ದೇಶದಿಂದ ವಾಸಕ್ಕೆ ಹಿಂದೇಟು ಹಾಕಿದ್ದು, ಈ ಪ್ರದೇಶವೀಗ ಜೂಜಾಟ, ಕುಡಿತದ ತಾಣಗಳಾಗಿ ಹೊರಹೊಮ್ಮಿದ್ದು, ಕೋಟ್ಯಂತರ ರೂ. ಪ್ರವಾಹದಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಶಾಲೆ ಹೋಗಲು ರಸ್ತೆ ಇಲ್ಲ
ರಾಯಚೂರು ತಾಲೂಕಿನ ತಲಮಾರಿ ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ನಿರ್ಮಾಣ ಮಾಡಿದ ಸ್ಥಳದಲ್ಲಿ ಪ್ರೌಢ ಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು, ಈ ಶಾಲೆಗೆ ತಲಮಾರಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 5 ಗ್ರಾಮಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ನಿರ್ಮಾಣ ಮಾಡಿದ ಮನೆಗಳಲ್ಲಿ ಯಾವುದೇ ಜನರು ವಾಸ ಮಾಡದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ಮಳೆ ಬಂದರೆ ವಿದ್ಯಾರ್ಥಿಗಳು ಕೇಸರಿನಲ್ಲಿ ನಡೆದುಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ.
2009ರಲ್ಲಿ ಜಿಲ್ಲೆಯಲ್ಲಿ ಭೀಕರ ನೆರೆಹಾವಳಿ ಬಂದ ಸಂದರ್ಭದಲ್ಲಿ ನದಿ ಪಾತ್ರದ ಗ್ರಾಮಗಳ ಜನರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಸರ್ಕಾರ ನಿರ್ಮಾಣ ಮಾಡಲಾಗಿತ್ತು. ಆದರೆ ಕೆಲವೇ ಜನರು ಮಾತ್ರ ವಾಸ ಮಾಡುತ್ತಿದ್ದಾರೆಂದು ಮಾಹಿತಿ ಇದೆ. ಶೀಘ್ರದಲ್ಲಿ ಪರಿಶೀಲನೆ ಮಾಡಿ ಜನರು ವಾಸ ಮಾಡಲು ಅನುಕೂಲ ಮಾಡಿಕೊಡಲಾಗುವುದು.
ನಿತೀಶ್ ಕೆ., ಜಿಲ್ಲಾಧಿಕಾರಿ ರಾಯಚೂರು.