

ಶಿವಮೊಗ್ಗ: ಸಚಿವ ಪ್ರಿಯಾಂಕ್ ಖರ್ಗೆ ಬಹಳ ಒಳ್ಳೆಯವರು. ಮಾತೆತಿದ್ದರೆ ಆರ್‌ಎಸ್‌ಎಸ್ ಸರಿ ಇಲ್ಲ ಎನ್ನುತ್ತ ಪ್ರಾಮಾಣಿಕರಂತೆ ನಡೆದುಕೊಳ್ಳುತ್ತಾರೆ. ಇದೀಗ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ಬಳಿಕ ಪ್ರಿಯಾಂಕ್ ಖರ್ಗೆ ಮುಖವಾಡ ಬಯಲಾಗಿದೆ. ಇದು ಸುಪಾರಿ ಕಿಲ್ಲರ್ ಸರ್ಕಾರ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಬರೆದಿಟ್ಟವರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಚನ್ನಬಸಪ್ಪ ಸವಾಲೆಸೆದರು. ರಕ್ಷಣಾ ವ್ಯವಸ್ಥೆ ಕಾಂಗ್ರೆಸ್‌ನ ಕೈಗೊಂಬೆಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇಲ್ಲ. ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಆರು ಜನರ ಬಂಧನಕ್ಕೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ಜತೆಗೆ ರಾಜ್ಯದಲ್ಲಿ ಬಾಣಂತಿಯರ ಸಾವು ನಿರಂತರವಾಗಿದೆ. ಮಕ್ಕಳು ಅನಾಥರಾಗಿದ್ದಾರೆ. ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರವೇ ನೇರ ಕಾರಣವಾಗಿದೆ ಎಂದು ಟೀಕಿಸಿದರು. ವಕ್ಫ್ ಆಸ್ತಿಗೆ ಕಾಂಪೌಂಡ್ ಹಾಕಲು 48 ಕೋಟಿ ರೂ. ಬಳಸುತ್ತಿದೆ. ಆದರೆ ರಾಜ್ಯದ ಪುರಾತನ ಹಿಂದು ದೇವಾಲಯಗಳ ಅಭಿವೃದ್ಧಿಗೆ ಹಣ ನೀಡಲು ಮೀನಮೇಷ ಎಣಿಸುತ್ತಿದೆ ಎಂದರು.
ಸೂಡಾ ಮಾಜಿ ಅಧ್ಯಕ್ಷರಾದ ಎನ್.ಜೆ.ನಾಗರಾಜ್, ಎಸ್‌ಜ್ಞಾನೇಶ್ವರ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಂಜುನಾಥ್, ದೀನ್ ದಯಾಳ್ ಸುದ್ದಿಗೋಷ್ಠಿಯಲ್ಲಿದ್ದರು.