

ತುಮಕೂರು: ಸಿದ್ದರಾಮೋತ್ಸವ ಅಲ್ಲ. ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನಾಚರಣೆಯ ಅಮೃತಮಹೋತ್ಸವವನ್ನು ಆ.3ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ ಎಂದು ಸಿದ್ದರಾಮಯ್ಯ ಜನ್ಮದಿನ ಆಚರಣೆ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಪುನರುಚ್ಚರಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನದಂದು ಅವರ 75 ವರ್ಷದ ಜೀವನದ ಪಯಣವನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅಮೃತ ಮಹೋತ್ಸವದ ಉದ್ದೇಶವಾಗಿದೆ. ಕಾಂಗ್ರೆಸ್, ಒಂದು ವರ್ಗದ ಮುಖಂಡರನ್ನಾಗಿ ಸಿದ್ದರಾಮಯ್ಯ ಅವರನ್ನು ಸೀಮಿತಗೊಳಿಸದೆ, ಎಲ್ಲ ಜಾತಿ, ವರ್ಗದ ಬಡವರ ಮುಖಂಡನನ್ನಾಗಿ ಬಿಂಬಿಸಲಾಗುವುದು ಎಂದು ನಗರದಲ್ಲಿ ಗುರುವಾರ ಪುರ್ವಭಾವಿಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್ ನೇತೃತ್ವದಲ್ಲಿ ಈ ಅಮೃತ ಮಹೋತ್ಸವ ನಡೆಯುತ್ತಿದ್ದು, ಈ ಸಮಾರಂಭ ಸಿದ್ದರಾಮಯ್ಯನವರ ಅಭಿಮಾನಿಗಳು, ಬಡ ಮತ್ತು ಹಿಂದುಳಿದ ವರ್ಗಗಳ ಜನರ ನೇತೃತ್ವದಲ್ಲಿ ನಡೆಯಲಿದೆ. 75ನೇ ಜನ್ಮದಿನದಂದು ಬಡಜನರಿಗೆ ಸಿದ್ದರಾಮಯ್ಯ ನೀಡಿದ ಕೊಡುಗೆಗಳನ್ನು ಮೆಲುಕು ಹಾಕಲಾಗುವುದು. ಇದನ್ನು ಸಿದ್ದರಾಮೋತ್ಸವ ಎಂದು ಕೆಲವರು ಬಿಂಬಿಸಲು ಹೊರಟಿದ್ದಾರೆ, ಅದು ಉತ್ಸವ ಅಲ್ಲ, ಹುಟ್ಟು ಹಬ್ಬ ಆಚರಣೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ರಾಜಕೀಯ ಪಯಣ, ಹೋರಾಟದ ಹಾದಿಯಲ್ಲಿ ಪಟ್ಟ ಕಷ್ಟ, ಸಾಗಿ ಬಂದ ದಾರಿ ಯುವಪೀಳಿಗೆಗೆ ಪರಿಚಯಿಸಬೇಕಿದೆ. ಹಾಗಾಗಿ, ಅವರನ್ನು ಈ ಅಮೃತ ಮಹೋತ್ಸವಕ್ಕೆ ಒತ್ತಾಯ ಮಾಡಿ ಒಪ್ಪಿಸಲಾಗಿದೆ. ಪಕ್ಷಾತೀತವಾಗಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿದ್ದು ನಾಡಿನೆಲ್ಲೆಡೆಯಿಂದ ಜನರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ವಿ.ವೆಂಕಟೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆಮಠ್ ಹಾಜರಿದ್ದರು.
ರಾಹುಲ್‌ಗಾಂಧಿ, ಸುರ್ಜೇವಾಲ, ಖರ್ಗೆ: ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸೇರಿ ರಾಷ್ಟ್ರ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಮಾರಂಭಕ್ಕೆ ಆಹ್ವಾನಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೆಎನ್ನಾರ್ ತಿಳಿಸಿದರು.
ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟವರು ಕಾಂಗ್ರೆಸ್ಸಿಗರು. ಸ್ವಾತಂತ್ರೃ ಹೋರಾಟಕ್ಕೆ ವಿರುದ್ಧವಾಗಿದ್ದವರು, ನಾವು ಕೊಡುಗೆ ಕೊಟ್ಟಿದ್ದೀವಿ ಅಂತ ಹೇಳುತ್ತಿದ್ದು ಜನರಿಗೆ ಮನವರಿಕೆ ಮಾಡಿಕೊಡಲು ಆ.15 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಧ್ವಜಹಿಡಿದು 1 ಲಕ್ಷಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
- ಕೆ.ಎನ್.ರಾಜಣ್ಣ ಮಾಜಿ ಶಾಸಕ