

ತೀರ್ಥಹಳ್ಳಿ: ಸಾಮಾಜಿಕ ಪರಿವರ್ತನೆ ಹರಿಕಾರ ಡಿ.ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಯೋಜನೆ ಉಳುವವನೇ ಹೊಲದೊಡೆಯ ಯೋಜನೆಯಿಂದ ಭೂಮಿ ಪಡೆದ ಗೇಣಿದಾರರು ಇಂದು ಭೂಮಾಲೀಕರಾಗಿ ನೆಮ್ಮದಿಯ ಜೀವನ ಸಾಗಿಸಲು ಕಾರಣರಾದರು ಎಂದು ಪಪಂ ಸದಸ್ಯ ಬಿ.ಗಣಪತಿ ಹೇಳಿದರು.
ತಾಲೂಕು ಆಡಳಿತ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತ್ಯುತ್ಸವದಲ್ಲಿ ಮಾತನಾಡಿ, ಶತ ಶತಮಾನಗಳಿಂದ ಸಮಾಜದಲ್ಲಿ ಬೇರು ಬಿಟ್ಟಿದ್ದ ಜೀತ ಪದ್ಧತಿ, ಮಲಹೊರುವ ಪದ್ಧತಿ ಸೇರಿದಂತೆ ಮುಂತಾದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವಲ್ಲಿ ಅ ಮಹನೀಯರು ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಕಾರಣ ಎಂದರು.
ಮಕ್ಕಳು ಶಿಕ್ಷಣದಿಂದ ವಂಚಿತಾರಗಬಾರದು ಎಂಬ ಉದ್ದೇಶದಿಂದ ಒಬಿಸಿ ಹಾಸ್ಟೆಲ್ ಆರಂಭಿಸಿದರು. ಇದರ ಪರಿಣಾಮವಾಗಿ ಇಂದು ರಾಜ್ಯದ ಅಲ್ಪಸಂಖ್ಯಾತ ಮಕ್ಕಳು ಸುಶಿಕ್ಷಿತರಾಗಿ ಸಮಾಜದ ಮುಂಚೂಣಿಗೆ ಬರಲು ಕಾರಣವಾಗಿದೆ. ಈ ಯೋಜನೆಯ ಫಲಾನುಭವಿಗಳಿಗೆ ಈ ಪುಣ್ಯಾತ್ಮನ ಸ್ಮರಣೆ ಅಗತ್ಯ ಎಂದು ಹೇಳಿದರು.
ಪ್ರಭಾರ ತಹಸೀಲ್ದಾರ್ ಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಆರ್.ಸತೀಶ್, ಮಡಿವಾಳ ಮಾಚಿದೇವ ಸಂಘದ ಉಗ್ರೇಶ್, ಶಿರಸ್ತೇದಾರ್ ಸತ್ಯಮೂರ್ತಿ, ಒಬಿಸಿ ಹಾಸ್ಟೆಲ್ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಇದ್ದರು.