ಬಗರ್‌ಹುಕುಂ ಸಮಸ್ಯೆಗೆ ಇತಿಶ್ರೀ: ಮಧು ಬಂಗಾರಪ್ಪ

17 tth 01
ತಾಲೂಕು ಆರ್ಯ ಈಡಿಗರ ಸಂಘದಿAದ ಕೋಳಿಕಾಲುಗುಡ್ಡದಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯ ಉದ್ಘಾಟನೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಸಚಿವ ಮಧು ಬಂಗಾರಪ್ಪ ಅನಾವರಣಗೊಳಿಸಿದರು. ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು, ರಾಮಚಂದ್ರ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ, ಆರ್.ಎಂ.ಮAಜುನಾಥಗೌಡ ಇತರರಿದ್ದರು.
Published on

ತೀರ್ಥಹಳ್ಳಿ: ದಶಕಗಳಿಂದ ಈ ಭಾಗದ ರೈತರನ್ನು ಕಾಡುತ್ತಿರುವ ಬಗರ್‌ಹುಕುಂ ಸಮಸ್ಯೆಗೆ ಇತಿಶ್ರೀ ಹಾಡುವ ಅಗತ್ಯವಿದ್ದು ಕೇಂದ್ರ ಹಾಗೂ ರಾಜ್ಯವನ್ನು ಪ್ರತಿನಿಽಸುವ ರಾಜಕಾರಣಿಗಳಾದ ನಾವುಗಳು ಪಕ್ಷಬೇಧ ಮರೆತು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ತಾಲೂಕು ಆರ್ಯ ಈಡಿಗರ ಸಂಘದಿAದ ಪಟ್ಟಣದ ಕೋಳಿಕಾಲುಗುಡ್ಡದಲ್ಲಿ ನಿರ್ಮಿಸಲಾಗಿರುವ ವಿದ್ಯಾರ್ಥಿನಿಲಯದ ಉದ್ಘಾಟನೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಲಯ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ನನೆಗುದಿಗೆ ಬಿದ್ದಿರುವ ಈ ಸಮಸ್ಯೆ ಬಗೆಹರಿಯದ ಕಾರಣ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಸೂರಿಲ್ಲದವರಿಗೆ ಮನೆಗಳನ್ನು ಕೊಡುವುದಕ್ಕೂ ಅಸಾಧ್ಯವಾಗಿದೆ. ಈ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದ್ದು ಪಕ್ಷಬೇಧ ಮರೆತು ನಾವುಗಳು ಮುನ್ನುಗ್ಗಬೇಕಿದೆ ಎಂದರು.
ಈಡಿಗ ಸಮುದಾಯದವರಲ್ಲಿ ಪ್ರತಿಭಾವಂತರಿದ್ದರೂ ಆರ್ಥಿಕವಾಗಿ ಹಿಂದುಳಿದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಾರಾಯಣಗುರು ಆಶಯಗಳನ್ನು ಪಾಲಿಸುವ ಸಲುವಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಜಿಲ್ಲೆಯಲ್ಲಿರುವ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯವನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಗರ್ತಿಕೆರೆಯ ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ನಾರಾಯಣಗುರುಗಳ ಆಶಯದಂತೆ ಮಕ್ಕಳ ಜ್ಞಾನಾರ್ಜನೆಗೆ ಆದ್ಯತೆ ನೀಡಲು ಸಮುದಾಯದಿಂದ ನಡೆದಿರುವ ಕಾರ್ಯ ಪ್ರಶಂಸನೀಯ. ಎಸ್.ಬಂಗಾರಪ್ಪ, ಕಾಗೋಡು ಸತ್ಯಾಗ್ರಹದ ಮೂಲಕ ಬಡ ಗೇಣಿದಾರರಿಗೆ ಬದುಕನ್ನು ಕಟ್ಟಿ ಕೊಟ್ಟಿರುವ ಕಾಗೋಡು ತಿಮ್ಮಪ್ಪ ಮತ್ತು ಈಡಿಗ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಸಮಾಜದ ಪರಿವರ್ತನೆ ತರುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಕ್ಕಳಿಗೆ ಶಿಕ್ಷಣ ನೀಡಲು ಹಾಗೂ ಸಮಾಜದ ಸೇವೆಯಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ನಾನೂ ವಿದ್ಯಾರ್ಥಿ ನಿಲಯದಲ್ಲಿದ್ದು ಶಿಕ್ಷಣ ಪಡೆದಿದ್ದೇನೆ. ಈ ಉದ್ದೇಶಕ್ಕೆ ಹಣದ ಕೊರತೆಯಾದಲ್ಲಿ ಹಿಂದುಳಿದ ಇಲಾಖೆಯಿಂದ ಸರ್ಕಾರದ ಅನುದಾನವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಮಾತನಾಡಿ, ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಶರಾವತಿ ಮುಳುಗಡೆ ಪ್ರದೇಶದ ೧೦ ಸಾವಿರ ಕುಟುಂಬಗಳು ಬೀದಿ ಪಲಾಗಿ ೬೦ ವರ್ಷಗಳೇ ಸಂದಿದ್ದರೂ ಇಂದಿಗೂ ಸಮಸ್ಯೆ ಬಗೆಹರಿದಿಲ್ಲ. ಇವರಲ್ಲಿ ಹೆಚ್ಚಿನವರು ಈಡಿಗ ಸಮಾಜದವರೇ ಆಗಿದ್ದೇವೆ. ಅರಣ್ಯ ಕಾಯ್ದೆ ಬದಲಾಗಿರುವುದಕ್ಕೆ ನಾವು ಕಾರಣರಲ್ಲ. ಸುಪ್ರೀಂಕೋರ್ಟಿಗೆ ಹೋಗುವ ಶಕ್ತಿಯೂ ನಮಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ಸಮಸ್ಯೆಯನ್ನು ಬಗೆಹರಿಸಲು ಅಸಾಧ್ಯವಾದರೆ ಈ ಕುಟುಂಬಗಳಿಗೆ ವಿಷವನ್ನಾದರೂ ಕೊಡಿ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಹತ್ತು ವರ್ಷ ನನ್ನ ರಾಜಕೀಯ ಜೀವನಕ್ಕೆ ಅಡ್ಡಿ ಮಾಡಿದ್ದಕ್ಕೆ ಯಡಿಯೂರಪ್ಪ ಅವರನ್ನು ನಾನು ಬೈಯ್ತಿನಿ. ಆದರೆ ಹಿರಿಯರಾದ ಕಾರಣ ಅವರು ಎದುರಿಗೆ ಸಿಕ್ಕಾಗ ಮಾತ್ರ ಅವರ ಕಾಲಿಗೂ ಬೀಳುತ್ತೇನೆ ಎಂದು ಹಾಸ್ಯವಾಗಿ ಹೇಳಿದರು.
ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಮುಖಂಡ ಆರ್.ಎಂ.ಮAಜುನಾಥ ಗೌಡ ಮಾತನಾಡಿದರು. ಪಪಂ ಅಧ್ಯಕ್ಷೆ ಗೀತಾ ರಮೇಶ್, ಮಾಜಿ ಶಾಸಕ ಡಾ. ಜಿ.ಡಿ.ನಾರಾಣಪ್ಪ, ನಿವೃತ್ತ ಪೊಲೀಸ್ ಅಽಕಾರಿ ಸುಬ್ರಹ್ಮಣ್ಯ ಇದ್ದರು.

ನಾವು ಕೇಳದಿದ್ರೆ ಮತ್ಯಾರಿಗೆ ಕೇಳಬೇಕು?
ಈಡಿಗ ಸಮುದಾಯದ ನಿಗಮ ಸ್ಥಾಪಿಸಿ ೫೦೦ ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ೫೫ ಲಕ್ಷ ಜನಸಂಖ್ಯೆ ಹೊಂದಿರುವ ನಾವು ಇದನ್ನು ನಮ್ಮ ಹಕ್ಕಾಗಿ ಕೇಳುತ್ತಿದ್ದೇವೆ. ಬೇರೆ ಸಮಾಜದವರಿಗೆ ಕೊಡ್ತೀರಿ ನಮಗ್ಯಾಕೆ ಕೊಡೋದಿಲ್ಲ? ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ನಮ್ಮ ಸಮಾಜದ ಬಗ್ಗೆ ನಾವು ಕೇಳದಿದ್ರೆ ಮತ್ಯಾರು ಕೇಳಬೇಕು ಎಂದೂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net