

ಹರೀಶ್ ಮೋಟುಕಾನ, ಮಂಗಳೂರು
ನಿರುದ್ಯೋಗ ಹೆಚ್ಚಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಯುವಜನತೆಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ತಲಾ 30 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರುತ್ತಿವೆ. ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ನಂತರ ಕೋರ್ಸ್‌ಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.
ಟಾಟಾ ಸಂಸ್ಥೆಯ ಸಹಭಾಗಿತ್ವದಲ್ಲಿ ಐಟಿಐಯನ್ನು ಸುಧಾರಿತ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತದೆ. ಇದಕ್ಕೆ ದ.ಕ ಜಿಲ್ಲೆಯ 5 ಮತ್ತು ಉಡುಪಿ ಜಿಲ್ಲೆಯ 4 ಸರ್ಕಾರಿ ಐಟಿಐಗಳು ಆಯ್ಕೆಗೊಂಡಿವೆ. ಯೋಜನೆ ಅನುಷ್ಠಾನ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ 1,713 ಐಟಿಐಗಳಿವೆ. 270 ಸರ್ಕಾರಿ, 196 ಅನುದಾನಿತ ಹಾಗೂ 1,247 ಖಾಸಗಿ ಸಂಸ್ಥೆಗಳು. 1.80 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಕೂಡ ಇವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪುರುಷರ ಹಾಗೂ ಮಹಿಳೆಯರ ಐಟಿಐಗಳು, ಪುತ್ತೂರು ನರಿಮೊಗರು ಐಟಿಐ, ವಿಟ್ಲ ಐಟಿಟಿ, ಬೆಳ್ತಂಗಡಿಯ ಐಟಿಐ ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಬೈಂದೂರು, ಪೆರ್ಡೂರು ಹಾಗು ಕಾರ್ಕಳ ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದ್ದು, ಒಂದೂವರೆ ತಿಂಗಳಲ್ಲಿ ಇವು ಸಿದ್ಧಗೊಳ್ಳಲಿವೆ ಎಂಬುದು ಅಧಿಕಾರಿಗಳ ವಿಶ್ವಾಸ.
ಪ್ರಮುಖ ಕೋರ್ಸ್‌ಗಳು: 2021-22ನೇ ಸಾಲಿನಲ್ಲಿ ಕೆಲ ಕೋರ್ಸ್‌ಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್ ಐಡೆಡ್ ಮೆನುಫ್ಯಾಕ್ಚರಿಂಗ್, ಮೆನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆ್ಯಂಡ್ ಅಟೋಮೇಷನ್, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಆ್ಯಂಡ್ ಡಿಜಿಟಲ್ ಮೆನುಫ್ಯಾಕ್ಚರಿಂಗ್, ಅಡ್ವಾನ್ಸ್‌ಡ್ ಪ್ಲಂಬಿಂಗ್, ಎಡ್ವಾನ್ಸ್‌ಡ್ ಟೂಲ್ಸ್, ಅಡ್ವಾನ್ಸ್‌ಡ್ ಅಟೊಮ್ಯಾಟಿಕ್ ಇಂಜಿನಿಯರಿಂಗ್, ಬ್ಯಾಟರಿ ಇಲೆಕ್ಟಿಕ್ ವೆಹಿಕಲ್, ಬೇಸಿಕ್ಸ್ ಆಫ್ ಡಿಸೈನ್ ಆ್ಯಂಡ್ ವರ್ಚುವಲ್ ವೆರಿಫಿಕೇಶನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಅಡ್ವಾನ್ಸ್‌ಡ್ ಮೆನುಫ್ಯಾಕ್ಚರಿಂಗ್ ದೀರ್ಘಾವಧಿಯ ಕೋರ್ಸ್‌ಗಳು.
ಇನ್ನೋವೇಶನ್ ಆ್ಯಂಡ್ ಡಿಸೈನ್ ಥಿಂಕಿಂಗ್, ಫಂಡಮೆಂಟಲ್ಸ್ ಆಫ್ ಪ್ರೊಡಕ್ಟ್ ಡಿಸೈನ್, ಪ್ರೊಸೆಸ್ ಕಂಟ್ರೊಲ್ ಆ್ಯಂಡ್ ಅಟೊಮೇಶನ್, ಅಟೋ ಇಲೆಕ್ಟ್ರಿಕಲ್ ಡಿಸೈನ್ ಆ್ಯಂಡ್ ಡೆವಲಪ್‌ಮೆಂಟ್, ಪ್ರೊಡಕ್ಟ್ ವೆರಿಫಿಕೇಶನ್ ಆ್ಯಂಡ್ ಅನಾಲಿಸಿಸ್, ಆಟೋ ಇಲೆಕ್ಟ್ರಿಕಲ್ ಮೆಯಿಟೆನೆನ್ಸ್, ಪ್ರೊಡಕ್ಟ್ ಡಿಸೈನ್ ಆ್ಯಂಡ್ ಡೆವಲಪ್‌ಮೆಂಟ್, ಕಂಪ್ಯೂಟರ್ ಐಡೆಡ್ ಮೆಷಿನಿಂಗ್, ಅಡ್ವಾನ್ಸ್‌ಡ್ ಅಟೊಮೊಬೈಲ್ ಇಂಜಿನಿಯರಿಂಗ್, ಇಲೆಕ್ಟ್ರಿಕ್ ವೆಹಿಕಲ್, ಇಂಟರ್ನೆಟ್ ಆಫ್ ಥಿಂಗ್ಸ್, ಅಡ್ವಾನ್ಸ್‌ಡ್ ಮೆಷಿನಿಂಗ್, ಅಡ್ವಾನ್ಸ್‌ಡ್ ವೆಲ್ಡಿಂಗ್, ಅಡ್ವಾನ್ಸ್‌ಡ್ ಪೆಯಿಂಟಿಂಗ್ ಟೆಕ್ನಾಲಜಿ, ಇಂಡಸ್ಟ್ರಿಯಲ್ ರೊಬೊಟಿಕ್ ಇವು ಅಲ್ಪಾವಧಿಯ ಕೋರ್ಸ್‌ಗಳಾಗಿವೆ.
ಈ ಕೋರ್ಸ್‌ಗಳಲ್ಲಿ ಎಲ್ಲವನ್ನು ಅಳವಡಿಸಲು ಕಷ್ಟ ಸಾಧ್ಯ. ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗವಕಾಶ ನೀಡುವ ಕೋರ್ಸ್‌ಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ದೀರ್ಘಾವಧಿಯ ಕೋರ್ಸ್‌ಗೆ ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ವಿಜ್ಞಾನ ಮತ್ತು ಗಣಿತವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು. ಅಲ್ಪಾವಧಿಯ ಕೋರ್ಸ್‌ಗೆ ಪ್ರವೇಶ ಪಡೆಯಲು ಐಟಿಐ ಅಂತಿಮ ವರ್ಷದ ವಿದ್ಯಾರ್ಥಿ ಅಥವಾ ಐಟಿಐ ಪದವೀಧರ ಹಾಗೂ ಅಡ್ವಾನ್ಸ್‌ಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಸಂಸ್ಥೆಯ ಶೇ.88 ಮತ್ತು ರಾಜ್ಯ ಸರ್ಕಾರದ ಶೇ.12ನಂತೆ ತಲಾ 30 ಕೋಟಿ ರೂ.ವೆಚ್ಚದಲ್ಲಿ ಐಟಿಐಗಳು ಮೇಲ್ದರ್ಜೆಗೇರುತ್ತಿವೆ. ದೀರ್ಘಾವಧಿ ಹಾಗೂ ಅಲ್ಪಾವಧಿ ಕೋರ್ಸ್‌ಗಳಿದ್ದು, ಇನ್ನೂ ಅಂತಿಮಗೊಂಡಿಲ್ಲ. ಕಟ್ಟಡ ಇಲ್ಲದ ಕಡೆಗಳಲ್ಲಿ ಅಗತ್ಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಮೆಷಿನರಿಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.
ಗಿರಿಧರ ಸಾಲ್ಯಾನ್, ಕೌಶಲಾಭಿವೃದ್ಧಿ ಅಧಿಕಾರಿ, ದ.ಕ.