

ನಾಗಮಂಗಲ: ಯುವ ಪೀಳಿಗೆ ತಂತ್ರಜ್ಞಾನ ಮೂಲಕ ಸ್ವಾವಲಂಬಿಗಳಾದಾಗ ಮಾತ್ರ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯ. ಅದರ ಜತೆಗೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಹೇಳಿದರು.
ಪಟ್ಟಣದ ದೇವಲಾಪುರ ಹ್ಯಾಂಡ್‌ಪೋಸ್ಟ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಆಯೋಜಿಸಿದ್ದ 2022ನೇ ಸಾಲಿನ ಐಟಿಐ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಐಟಿಐ ಕೋರ್ಸ್‌ನ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಘಟಿಕೋತ್ಸವವನ್ನು ಆಯೋಜಿಸಲು ಮುಂದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಮನಸ್ಸಿನಲ್ಲಿ ಬರುವ ಕೀಳರಿಮೆ ದೂರ ಮಾಡಿ, ನಿಮ್ಮಲ್ಲಿ ನಿಜವಾದ ಕೌಶಲ, ಅನುಭವ ಇದ್ದರೆ ನೀವೇ ಹಲವು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಲಿದ್ದೀರಾ. ಇಂದು ಯಾರು ಉತ್ತಮ ಕೌಶಲ ಹೊಂದಿದ್ದಾರೋ ಅವರಿಗೆ ಅವಕಾಶಗಳು ಹೆಚ್ಚಿವೆ ಎಂದರು.
ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣರಾದ 29 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಣೆ ಮದ್ರಾಸ್ ಕಂಪನಿಯ ಉಪಪ್ರಧಾನ ವ್ಯವಸ್ಥಾಪಕ ಕೆ.ಪಿ.ವಿಜಯ್‌ಕುಮಾರ್ ಮಾತನಾಡಿದರು.
ಪ್ರಾಂಶುಪಾಲ ಶ್ರೀನಿವಾಸ್, ಕಿರಿಯ ತರಬೇತಿ ಅಧಿಕಾರಿ ಬಿ.ಎನ್.ಸುರೇಶ್‌ಬಾಬು, ಸಹಪ್ರಾಧ್ಯಾಪಕಿ ಶಾರದಮ್ಮ, ಕಿರಿಯ ತರಬೇತಿ ಅಧಿಕಾರಿ ರಾಘವೇಂದ್ರ, ಕರಡಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ನಾಗರಾಜು, ಸದಸ್ಯೆ ಮಹಾಲಕ್ಷ್ಮೀ ಸೇರಿದಂತೆ ಮುಂತಾದವರಿದ್ದರು.