ವಾರಸುದಾರರ ಕೈ ಸೇರಿದ 4.23 ಕೋಟಿ ರೂ. ಮೌಲ್ಯದ ವಸ್ತುಗಳು

8
Published on

ಮೈಸೂರು: ನಾನಾ ಕಳವು, ದರೋಡೆ, ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚಿರುವ ನಗರ ಪೊಲೀಸರು ಒಟ್ಟು 4.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.

ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯುಕ್ತೆ ಸೀಮಾ ಲಾಟ್ಕರ್, ವಸ್ತು ಕಳೆದುಕೊಂಡ ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಎಂಟು ತಿಂಗಳಲ್ಲಿ 4 ಸುಲಿಗೆ, 2 ದರೋಡೆ, 21 ಸರಗಳ್ಳತನ ಪ್ರಕರಣ, 34 ಕಳ್ಳತನ, 6 ಮನೆಗಳ್ಳತನ ಹಾಗೂ 69 ವಾಹನ ಕಳವು ಸೇರಿದಂತೆ ಒಟ್ಟು 69 ಪ್ರಕರಣಗಳನ್ನು ಪತ್ತೆ ಹೆಚ್ಚಿದ್ದಾರೆ.

5 ಕೆಜಿ 320 ಗ್ರಾಂ ಚಿನ್ನಾಭರಣ, 6 ಕೆಜಿ 246 ಗ್ರಾಂ ಬೆಳ್ಳಿ ಪದಾರ್ಥಗಳು, 52 ದ್ವಿಚಕ್ರ ವಾಹನಗಳು, 9 ಕಾರುಗಳು, 8 ಗೂಡ್ಸ್ ವಾಹನಗಳು ಸೇರಿದಂತೆ 13,54,500 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಪ್ರಕರಣದಲ್ಲಿ ಒಟ್ಟು 4,23,60,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದಂದಾಗಿದೆ. ಈ ಎಲ್ಲ ಪ್ರಕರಣಗಳಿಂದ ಪ್ರಮುಖ 20 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ಅಂತಾರಾಜ್ಯ ಆರೋಪಿಗಳಾಗಿದ್ದಾರೆ.

ಪ್ರಮುಖ ಪ್ರಕರಣಗಳು: ನಗರ ಅಪರಾಧ ಪತ್ತೆ ದಳ (ಸಿಸಿಬಿ)ದಿಂದ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿ, 22 ವಿವಿಧ ಸ್ವತ್ತು ಕಳವು ಪ್ರಕರಣವನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ 62,17,500 ರೂ. ಮೌಲ್ಯದ 802.576 ಗ್ರಾಂ ಚಿನ್ನದ ಆಭರಣಗಳು, 1,520 ಗ್ರಾಂ ಬೆಳ್ಳಿ ಪದಾರ್ಥಗಳು, 5 ವಾಹನ, 1 ಪಿಸ್ತೂಲ್ ಮತ್ತು 2 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಸರಸ್ವತಿಪುರಂ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ 5 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದು, 38,82,024 ರೂ. ಮೌಲ್ಯದ 539.17 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಆಲನಹಳ್ಳಿ ಪೊಲೀಸರು 4 ಆರೋಪಿಗಳು, ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು 7 ಸರಗಳ್ಳತನ ಪ್ರಕರಣ ಪತ್ತೆ ಮಾಡಿ 15 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ನಜರ್‌ಬಾದ್ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ 11 ವಾಹನ ಕಳವು ಪ್ರಕರಣ ಪತ್ತೆ ಮಾಡಿದ್ದು, 7 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎನ್‌ಡಿಪಿಎಸ್ ಪ್ರಕರಣ

ಮೈಸೂರು ನಗರ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ಒಟ್ಟು 52 ಆರೋಪಿಗಳನ್ನು ಬಂಧಿಸಲಾಗಿದೆ. 57,47,850 ರೂ. ಮೌಲ್ಯದ 224 ಕೆಜಿ 375 ಗ್ರಾಂ ಗಾಂಜಾ, 96 ಗ್ರಾಂ 16 ಮಿಗ್ರಾಂ ಸಿಂಥೆಟಿಕ್ಸ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಸೈಬರ್ ಪ್ರಕರಣಗಳು

ಆನ್‌ಲೈನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಇನ್ವೆಸ್ಟ್‌ಮೆಂಟ್ ವಂಚನೆ, ಷೇರು ಮಾರುಕಟ್ಟೆ 4, ಕೆಲಸ ಕೊಡಿಸುವ ಹಾಗೂ ಟಾಸ್ಕ್ ವಂಚನೆಗೆ ಸಂಬಂಧಿಸಿದಂತೆ 1, ಡಿಜಿಟಲ್ ಅರೆಸ್ಟ್ 1, ಟಿಪ್‌ಲೈನ್ 1ಪ್ರಕರಣಗಳನ್ನು ಪತ್ತೆ ಮಾಡಿ, ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ದೊಡ್ಡ ಮೊತ್ತದ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ ಆಯುಕ್ತೆ, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಪ್ರಶಂಸನಾ ಪತ್ರ ವಿತರಿಸಿದರು. ಮೈಸೂರು ನಗರ ಡಿಸಿಪಿಗಳಾದ ಮುತ್ತುರಾಚ್, ಸುಂದರ್ ರಾಜ್, ಮುತ್ತುರಾಜ್ ಇನ್ನಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net