ಎಲ್​ಇಡಿ ಬೀದಿದೀಪ ಬೆಳಗಲು ಬೇಕು ಇನ್ನೂ 8 ತಿಂಗಳು

New Phone in
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್​ಗಳಲ್ಲಿ ಎಲ್​ಇಡಿ ಬೀದಿದೀಪ ಅಳವಡಿಸುವ ಕಾರ್ಯ ಇನ್ನೂ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.

ಇಲ್ಲಿನ ಪಾಲಿಕೆ ಮುಖ್ಯ ಕಚೇರಿಯ ಮೇಯರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ 3ನೇ ಫೋನ್ ಇನ್ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು, ಇನ್ನೂ ಒಂದು ತಿಂಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಲಾಗುವುದು. ಪಿಪಿಇ ಮಾದರಿಯಡಿ ಗುತ್ತಿಗೆದಾರರು 7 ವರ್ಷಗಳವರೆಗೆ ಬೀದಿ ದೀಪಗಳ ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.

ಕಳೆದ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ 47 ಕರೆ ಬಂದಿದ್ದವು. ಅವುಗಳಲ್ಲಿ ಬಹುತೇಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಇಂದಿನ ಪೋನ್ ಇನ್ ಕಾರ್ಯಕ್ರಮಕ್ಕೆ 41 ಜನರು ಕರೆ ಮಾಡಿ ದೂರು ನೀಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಸ್ವಚ್ಛತೆ, ಅಸಮರ್ಪಕ ನೀರು ಪೂರೈಕೆ, ರಸ್ತೆ ದುರಸ್ತಿ ಬಗ್ಗೆ ದೂರುಗಳು ಬಂದಿವೆ. ಎಲ್ಲ ದೂರುಗಳನ್ನು ನಿಗದಿತ ಅವಧಿಯಲ್ಲಿ ನಿವಾರಿಸಲಾಗುವುದು ಎಂದು ತಿಳಿಸಿದರು.

ಹಂದಿ, ಬೀದಿ ನಾಯಿ, ಬಿಡಾಡಿ ದನಗಳ ಬಗ್ಗೆಯೂ ದೂರುಗಳು ಬಂದಿವೆ. ಹಂದಿಗಳ ಮಾಲೀಕರೊಂದಿಗೆ ಈ ಹಿಂದೆಯೇ ಸಭೆ ನಡೆಸಲಾಗಿತ್ತು. ಅವರು ಜನವರಿವರೆಗೆ ಗಡವು ಕೇಳಿದ್ದರು. ಹೀಗಾಗಿ, ಶೀಘ್ರ ಹೈದ್ರಾಬಾದ್ ಹಾಗೂ ಹಾಸನದಿಂದ ಹಂದಿ ಹಿಡಿಯುವ ತಂಡಗಳನ್ನು ಕರೆಯಿಸಲಾಗುವುದು. ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಬಿಡಾಡಿ ದನಗಳು ರಸ್ತೆಯಲ್ಲಿ ಕಂಡರೆ ಅವುಗಳನ್ನು ಪಾಂಜರಪೋಳಕ್ಕೆ ಸಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನೆ ಮನೆಯಿಂದ ಕಸ ಸಂಗ್ರಹಕ್ಕೆ ಇನ್ನೂ 190 ಟಿಪ್ಪರ್​ಗಳ ಅಗತ್ಯವಿದೆ. ಸಧ್ಯ ಪಾಲಿಕೆಯಲ್ಲಿ 210 ಟಿಪ್ಪರ್​ಗಳಿವೆ. ಟಿಪ್ಪರ್​ಗಳು ಕೆಟ್ಟು ನಿಂತರೆ ಅವುಗಳ ದುರಸ್ತಿಗೆ ಕನಿಷ್ಠ ಎರಡು ತಿಂಗಳಾದರೂ ಬೇಕಾಗುತ್ತದೆ. ಹೀಗಾಗಿ, ಸ್ಥಳೀಯವಾಗಿಯೇ ಟಿಪ್ಪರ್​ಗಳನ್ನು ದುರಸ್ತಿಗೊಳಿಸಲು ಯೋಜನೆ ನಿರ್ವಿುಸಲಾಗಿದೆ ಎಂದರು.

ಸ್ವಚ್ಛತೆ ಕಾಪಾಡುವುದಕ್ಕಾಗಿ ಪಾಲಿಕೆಗೆ ಇನ್ನೂ 800 ಜನ ಪೌರ ಕಾರ್ವಿುಕರ ಅಗತ್ಯವಿದೆ. ಪೌರ ಕಾರ್ವಿುಕರ ನೇಮಕಕ್ಕೆ ಅನುಮತಿ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಗುತ್ತಿಗೆದಾರರ ಬಾಕಿ 120 ಕೋಟಿ ಮೊತ್ತವನ್ನು ಹಂತ ಹಂತವಾಗಿ ನೀಡಲಾಗುವುದು. ಈ ತಿಂಗಳು 2-3 ಕೋಟಿ ರೂ. ವಿತರಿಸಲಾಗುವುದು. ನಂತರ ತಿಂಗಳಲ್ಲಿ ಪ್ರತಿ ತಿಂಗಳು 2 ರಿಂದ 4 ಕೋಟಿ ರೂ. ನೀಡಲಾಗುವುದು. ಪಾಲಿಕೆ ಆರ್ಥಿಕ ಸ್ಥಿತಿಯೂ ಗಂಭೀರವಾಗಿದೆ. ಆದಾಯ ಕ್ರೋಢೀಕರಣಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಫೋನ್ ಇನ್ ಕಾರ್ಯಕ್ರಮದಲ್ಲಿ ಹಾಜರಿದ್ದ ವಲಯ ಸಹಾಯಕ ಆಯುಕ್ತರು ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಮಾತನಾಡಿದ ಮೇಯರ್ ರಾಮಪ್ಪ ಬಡಿಗೇರ, ದೂರು ನೀಡಿದ ನಾಗರಿಕರ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಕಾರ್ಯ ಮಾಡಬೇಕು. ಕೇವಲ ದೂರು ನೀಡಿದವರಿಗೆ ಮುಖ ತೋರಿಸಿ ಬಂದರೆ ಸಾಲದು. ಸಮಸ್ಯೆ ನಿವಾರಣೆಯಾಗುವವರೆಗೂ ಸಂಬಂಧಿಸಿದ ದೂರು ಚಾಲ್ತಿಯಲ್ಲಿಯೇ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net