

ತುಮಕೂರು: ಜಿಲ್ಲೆಯಲ್ಲಿ ಸತತ 3ನೇ ದಿನವೂ ಕರೊನಾ ಶತಕ ಬಾರಿಸಿದೆ. ಗುರುವಾರ ಒಂದೇ ದಿನ 116 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3119ಕ್ಕೇರಿಕೆಯಾಗಿದೆ.
ತುಮಕೂರು ತಾಲೂಕಿನಲ್ಲಿ ಗುರುವಾರ ಒಂದೇ ದಿನ 49 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೆ ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 1189ಕ್ಕೆ ಮುಟ್ಟಿದೆ. ಇನ್ನುಳಿದಂತೆ ಕುಣಿಗಲ್ 18, ಶಿರಾ-13, ಪಾವಗಡ-12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುಬ್ಬಿ 8, ಮಧುಗಿರಿ 6, ತುರುವೇಕೆರೆ 4, ತಿಪಟೂರು 3, ಕೊರಟಗೆರೆ 2 ಹಾಗೂ ಚಿಕ್ಕನಾಯಕನಹಳ್ಳಿ ಓರ್ವರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೂರು ಬಲಿ: ತುಮಕೂರಿನ ಇಬ್ಬರು ಹಾಗೂ ತಿಪಟೂರಿನ ಒಬ್ಬರನ್ನು ಕರೊನಾ ಬಲಿ ಪಡೆದಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ 92ಕ್ಕೆ ಮುಟ್ಟಿದೆ. ಪಿಎಚ್ ಕಾಲನಿ ನಿವಾಸಿ, 53 ವರ್ಷದ ವ್ಯಕ್ತಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಸ್‌ಎಸ್‌ಎಂಸಿ ಆಸ್ಪತ್ರೆಗೆ ಆ.3 ರಂದು ದಾಖಲಾಗಿದ್ದರು. ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆ.9ರಂದು ಮೃತಪಟ್ಟಿದ್ದರು.
ಸದಾಶಿವನಗರದ 60 ವರ್ಷದ ವೃದ್ಧೆ ಮಹಿಳೆ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಿಪಟೂರಿನ ಗೋವಿಂದಪುರದ 55 ವರ್ಷದ ವ್ಯಕ್ತಿ ಆ.8ರಂದು ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಆ.10ರಂದು ಸಾವನ್ನಪ್ಪಿದ್ದರು. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
2 ಸಾವಿರ ಗಡಿದಾಟಿದ ಗುಣಮುಖರು !: ಗುರುವಾರ ಒಂದೇ ದಿನ 125 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 2008 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಒಟ್ಟು 1019 ಸಕ್ರಿಯ ಪ್ರಕರಣಗಳಿದ್ದು 13 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಗುಬ್ಬಿ ಶಾಸಕರ ಕುಟುಂಬಕ್ಕೆ ಸೋಂಕು: ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಪತ್ನಿ ಭಾರತಿ, ಪುತ್ರಿ ತೇಜನ್ವಿಸಿ, ಪುತ್ರ ದುಷ್ಯಂತ್‌ಗೆ ಕರೊನಾ ಸೋಂಕು ತಗುಲಿದೆ. ಮೂವರು ತುಮಕೂರಿನ ವಿದ್ಯಾನಗರದ ಮನೆಯಲ್ಲೇ ಹೋಂ ಐಸೋಲೇಷನ್‌ನಲ್ಲಿದ್ದು, ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ದೇಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ಶ್ರೀನಿವಾಸ್ ಹಾಗೂ ಅಳಿಯನಿಗೆ ನೆಗೆಟಿವ್ ಬಂದಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ದುಷ್ಯಂತ್ ಕೋರಿದ್ದಾರೆ. ನಮ್ಮ ಕುಟುಂಬದ ರ‌್ಯಾಪಿಡ್ ಟೆಸ್ಟ್ ಹಾಗೂ ಆರ್‌ಟಿಪಿಸಿಆರ್ ಕರೊನಾ ಪರೀಕ್ಷಾ ವರದಿ ಬಂದಿದ್ದು, ನನಗೆ ನೆಗೆಟಿವ್ ಬಂದಿದೆ. ಪತ್ನಿ, ಮಗ ಹಾಗೂ ಮಗಳಿಗೆ ಪಾಸಿಟಿವ್ ಬಂದಿದೆ. ಜಿಲ್ಲಾಸ್ಪತ್ರೆ ವೈದ್ಯರ ನಿರ್ದೇಶನದಂತೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.