

ವಿಜಯಪುರ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಚುನಾವಣೆ ಮುನ್ನ ನೀಡಿದ್ದ ಐದು ಗ್ಯಾರಂಟಿ ಯೋಜನೆಯನ್ನು ಈಗ ಹಂತ ಹಂತವಾಗಿ ಈಡೇರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಶನಿವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ, ನಮ್ಮ ಸರ್ಕಾರ ರಾಜ್ಯದ ಅಭಿವೃದ್ದಿ ಜತೆಯಲ್ಲಿ ಬಡವರ, ಕೃಷಿಕರ ಏಳಿಗೆಗೆ ಶ್ರಮಿಸುತ್ತಿದೆ.
ಈ ಯೋಜನೆಗಳು ಪ್ರತಿಯೊಂದು ಕುಟುಂಬದ ಆರ್ಥಿಕ ಸ್ವಾವಲಂಬನೆಗೆ ಸದೃಢ ಬದುಕು ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಸಹ ಸರ್ಕಾರದ ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಜೀವನ ನಿರ್ವಹಣೆ ಸುಗಮ ಹಾಗೂ ಜೀವನ ಗುಣಮಟ್ಟ ಉತ್ತಮಪಡಿಸಿಕೊಳ್ಳಬೇಕು ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ನಗರ ಮತ್ತು ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸುವ ಗ್ಯಾರಂಟಿಗಳನ್ನು ನಮ್ಮ ಸರ್ಕಾರ ದಕ್ಷತೆಯಿಂದ ಜಾರಿಗೆ ತಂದಿದೆ.
ಕುಡಿಯುವ ನೀರು, ರಸ್ತೆ, ವಸತಿ, ಆಸ್ಪತ್ರೆ ಸೇರಿದಂತೆ ಮುಂತಾದ ಮೂಲ ಸೌಕರ್ಯ ಜನರಿಗೆ ಕಲ್ಪಿಸಲಾಗುತ್ತಿದ್ದು, 5 ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆಗೆ ಇಂದು ಚಾಲನೆ ನೀಡಿರುವುದು, ಅವಿಸ್ಮರಣೀಯ ಕಾರ್ಯಕ್ರಮವಾಗಿದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಬಡವರು ಆರ್ಥಿಕವಾಗಿ ಸಬಲಗೊಳ್ಳಲು ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಈ ಮೂಲಕ ಸರ್ಕಾರ ರಾಜ್ಯದ ಸರ್ವ ಜನಾಂಗದ ಸರ್ವತೋಮುಖ ಅಭಿವೃದ್ದಿಗಾಗಿ ಹೆಜ್ಜೆಯಿಟ್ಟಿದೆ ಎಂದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಈ ಯೋಜನೆಗಳು ಸಹಕಾರಿಯಾಗಿವೆ.
ಈ ಯೋಜನೆ ಅನುಷ್ಠಾನದ ಮೂಲಕ ಅಧಿಕಾರಿಗಳು ಹಾಗೂ ಜನರ ಮಧ್ಯ ಸಂಪರ್ಕ ಹೆಚ್ಚಾಗಿ, ಅಭಿವೃದ್ದಿ ಕಾರ್ಯಗಳಿಗೆ ಉತ್ತೇಜನ ದೊರೆಯಲಿದೆ ಎಂದರು.ಜಿಪಂ ಸಿಇಒ ರಾಹುಲ್ ಶಿಂಧೆ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಹೆಸ್ಕಾಂ ಹುಬ್ಬಳ್ಳಿ ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲಟ್ಟಿ, ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ. ಗೊಟ್ಯಾಳ ಉಪಸ್ಥಿತರಿದ್ದರು.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಶೇ. 80.13ರಷ್ಟು ಗ್ರಾಹಕರು ಗೃಹಜ್ಯೋತಿಯಡಿ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು 2.16 ಲಕ್ಷ ಪಂಪಸೆಟ್‌ಗಳಿವೆ. 4.60 ಲಕ್ಷ ಗೃಹ ಬಳಕೆದಾರರಿದ್ದು, ಜಿಲ್ಲೆಯ 26 ಸಾವಿರ ಬಳಕೆದಾರರು 200 ಯುನಿಟ್‌ಕ್ಕಿಂತ ಹೆಚ್ಚು ವಿದ್ಯುತ್ ಬಳಸುತ್ತಿದ್ದು, ಇವರಲ್ಲಿ ಗ್ರಾಮೀಣ ಭಾಗದ 2 ಸಾವಿರ ಹಾಗೂ ನಗರ ಪ್ರದೇಶದ 24ಸಾವಿರ ಬಳಕೆದಾರರಿದ್ದಾರೆ. ಗೃಹಜ್ಯೋತಿ ಯೋಜನೆಯಿಂದ ಗ್ರಾಮೀಣ ಭಾಗದ ಶೇ. 99.5ರಷ್ಟು ಹಾಗೂ ನಗರಪ್ರದೇಶದ ಶೇ. 90ರಷ್ಟು ಬಳಕೆದಾರರಿಗೆ ಸೌಲಭ್ಯ ದೊರಕಲಿದೆ. ಎಂ.ಬಿ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ