ಟಿಕೆಟ್ ತಪ್ಪಿಸಿದ್ದು, ಯಡಿಯೂರಪ್ಪ ಅಲ್ಲ: ಪ್ರತಾಪಸಿಂಹ ಹೇಳಿಕೆ

Prathap Simha
Published on

ಮೈಸೂರು: ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಎಳೆದು ತರಬೇಡಿ. ಅವರು ಪಕ್ಷ ಕಟ್ಟದೆ ಇದ್ದರೆ ಕರ್ನಾಟಕದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು? ಎಂದು ಪ್ರಶ್ನಿಸಿದ ಸಂಸದ ಪ್ರತಾಪಸಿಂಹ ಅವರು, ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಅಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ಕಟ್ಟದೆ ಇದ್ದರೆ ನಮ್ಮಂಥವರು ಸಂಸದ ಆಗೋದಕ್ಕೆ ಆಗುತ್ತಿತ್ತಾ? ಕರ್ನಾಟಕಕ್ಕೆ ಯಡಿಯೂರಪ್ಪ ಅವರು ಒಂಥರ ಮೋದಿ ರೀತಿ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಪ್ರತಾಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ತಪ್ಪುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, 2018ರಲ್ಲಿ ಹೆಸರು ಕೆಡಿಸಿಕೊಂಡಿದ್ದಕ್ಕೆ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಗೆ ಹೋಗಿದ್ದ? ನಂತರ ಬಾದಾಮಿಯಲ್ಲಿ ಹೆಸರು ಕೆಡಿಸಿಕೊಂಡಿದ್ದಕ್ಕೆ ವರುಣಕ್ಕೆ ಬಂದಿರುವುದಾ? ಹಿರಿಯರಾದ ಸಿದ್ದರಾಮಯ್ಯ ಅವರು ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಹಾಗಾದರೆ ಅವರು ಹೆಸರು ಕೆಡಿಸಿಕೊಂಡಿದ್ದರಾ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಮೋದಿಗೆ ನನಗೆ ಸದಾ ಪ್ರೇರಣೆ, ಸ್ಫೂರ್ತಿ. ಅವರು ಏನೇ ನಿರ್ಧಾರ ತೆಗೆದುಕೊಂಡರು ನಾನು ಅದನ್ನು ಸ್ವೀಕರಿಸುತ್ತೇನೆ. ಮೋದಿಗಿಂತ ದೊಡ್ಡದು ನನಗೆ ಯಾವುದು ಇಲ್ಲ. ಅವರು ಎರಡು ಬಾರಿ ಸಂಸದರಾಗಲು ಅವಕಾಶ ಮಾಡಿಕೊಟ್ಟ ತೃಪ್ತಿ ಇದೆ. ಮುಂದೆ ಸಂಸದರನ್ನಾಗಿ ಮಾಡದೆ ಇದ್ದರು ತೃಪ್ತಿ ಇದೆ. ನನ್ನ ಜೀವ ಇರುವವರೆವಗೂ ಮೋದಿ ಭಕ್ತನಾಗಿಯೇ ಇದ್ದು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.
ಟಿಕೆಟ್ ಕೊಡಿ ಎಂದು ಕರ್ನಾಟಕದಲ್ಲಿ ಎಷ್ಟು ಸಂಸದರ ಪರವಾಗಿ ಹೋರಾಟ ನಡೆಯುತ್ತಿದೆ ? ಆದರೆ, ನನಗೆ ಟಿಕೆಟ್ ಕೊಡಬೇಕು ಅಂತ ಜನ ಕೇಳುತ್ತಿದ್ದಾರೆ. ನನಗೆ ಜನರ ಅಷ್ಟು ಪೀತಿ ಸಾಕು. 1960ರಲ್ಲಿ ನಮ್ಮಪ್ಪ ಜನಸಂಘದಲ್ಲಿ ಇದ್ದರು. ಬೇರೆ ರಾಜಕಾರಣಿ ರೀತಿ ಅಲ್ಲ. ಸಾಯುವವರೆಗೂ ಬಿಜೆಪಿಯಲ್ಲಿ ಇರುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net