

ಲಕ್ಷ್ಮೇಶ್ವರ: ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯದ ಮೂಲಕ ಕನ್ನಡವನ್ನು ಆಗಸದೆತ್ತರಕ್ಕೆ ಏರಿಸಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಈಶ್ವರ ಮೆಡ್ಲೇರಿ ಹೇಳಿದರು.
ಪರಿಷತ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ 121ನೇ ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕುವೆಂಪು ಅವರು ಎಲ್ಲ ರಂಗದ ವಿಮರ್ಶೆ ಮೂಲಕ ಸಮಾಜವನ್ನು ಜಾಗೃತವಾಗಿಸಿದ್ದಾರೆ. ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸೌಹಾರ್ದ, ಭ್ರಾತೃತ್ವದಿಂದ ಬಾಳೋಣ. ಅಂದಾಗ ಮಾತ್ರ ಮನುಜ ಮತ-ವಿಶ್ವಪಥದ ಚಿಂತನೆ ಮತ್ತು ವಿಶ್ವಮಾನವ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ಮಾತನಾಡಿ, ವಿಶ್ವದ ಏಳಿಗೆಗೆ ವಿಶ್ವಮಾನವತೆಯ ಸಂದೇಶವೊಂದೇ ಪರಿಹಾರ. ಅಂತಹ ವಿಶ್ವಮಾನವತೆ ಸಂದೇಶ ಸಾರಿದ ಕುವೆಂಪು ನಮ್ಮ ಕನ್ನಡದ ಅಸ್ಮಿತೆ. ವಿಶೇಷವಾಗಿ ಸಮ ಸಮಾಜದ ಇಂದಿನ ಅವಶ್ಯಕತೆಯನ್ನು ಸಾರಿ ಹೇಳಿದವರು. ಅವರ ಜನ್ಮ ಜಯಂತಿ ನಮ್ಮೆಲ್ಲರ ಜಾಗೃತಿ ಎಂದರು.
ಯಲ್ಲಾಪುರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ.ಎಚ್. ದಿಂಡವಾಡ ಮಾತನಾಡಿ, ಕುವೆಂಪು ಇಲ್ಲದ ಕನ್ನಡವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಎಚ್.ಎಂ. ಅರಳಿಹಳ್ಳಿ ಮಾತನಾಡಿದರು. ಪರಿಷತ್ತಿನ ಸಲಹಾ ಸಮಿತಿಯ ಎಸ್.ಐ. ಆಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ. ಗುತ್ತಲ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಎಸ್.ಬಿ. ಅಣ್ಣಿಗೇರಿ ವಂದಿಸಿದರು. ಮಾಜಿ ಪ್ರಧಾನಿ ದಿ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಿದ್ದಣ್ಣ ಕಳಸಣ್ಣವರ ಇತರರಿದ್ದರು.