ಸಣ್ಣ ಸಮಾಜಕ್ಕೆ ಧ್ವನಿ ಕೊಟ್ಟವರು ಹಡಪದ ಅಪ್ಪಣ್ಣ

mysore
Published on

ಮೈಸೂರು: ಯಾವ ವೃತ್ತಿಯೂ ಕೀಳಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಹಡಪದ ಅಪ್ಪಣ್ಣ ಎಂದು ದೇವನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಲೇಖಕ ಡಾ.ಉಮೇಶ ಬೇವಿನಹಳ್ಳಿ ಹೇಳಿದರು.


ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದರು.


ಯಾವ ಸಮಾಜಕ್ಕೆ ಧ್ವನಿ ಇರಲಿಲ್ಲವೋ ಅಂತಹ ಸಮಾಜಕ್ಕೆ ಒಲವು ನೀಡಿ ಧ್ವನಿ ತಂದು ಕೊಟ್ಟಂತಹ ಮಹಾ ಪುರುಷರೇ ಹಡಪದ ಅಪ್ಪಣ್ಣ ಎಂದು ಬಣ್ಣಿಸಿದರು.


ಅವರು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಬಲಗೈ ಬಂಟ ಎಂತಲೇ ಹೇಳಬಹುದು. ಇವತ್ತಿನ ಸಂಸತ್ ಅಥವಾ ಶಾಸಕಾಂಗದ ರೀತಿಯಲ್ಲಿ ಬಸವಣ್ಣನವರು ಇದ್ದರೆ ಕಾರ್ಯಾಂಗ ವ್ಯವಸ್ಥೆಯಾಗಿ ಹಡಪದ ಅಪ್ಪಣ್ಣನವರು ಅನುಭವ ಮಂಟಪವನ್ನು ಮುನ್ನಡಿಸಿಕೊಂಡು ಹೋಗುತ್ತಿದ್ದರು. ಆಧುನಿಕ ಸಮಾಜದ ನ್ಯಾಯಾಂಗ ವ್ಯವಸ್ಥೆಯಂತೆ ಆ ಕಾಲದಲ್ಲೇ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದರು.


ಅಪ್ಪಣ್ಣನವರು 120ಕ್ಕೂ ಹೆಚ್ಚಿನ ವಚನಗಳನ್ನು ರಚಿಸಿದ್ದಾರೆ. ದೇಶದ ಸವಾರ್ಂಗೀಣ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ವೃತ್ತಿಯೂ ತನ್ನದೇ ಆದ ಮಹತ್ವ ಹೊಂದಿದ್ದು, ಯಾವ ವೃತ್ತಿಯೂ ಮೇಲು-ಕೀಳಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟರು ಎಂದರು.


ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಅನೇಕ ಪಾಂಡಿತ್ಯವನ್ನು ಹೊಂದಿದ್ದ ಸಮಾಜ ಸುಧಾರಕ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಶಿವಶರಣರ ಜಯಂತಿಗಳು ಕೇವಲ ಸಾಂಕೇತಿಕವಾಗಿ ಆಚರಣೆಗೆ ಮಾತ್ರ ಸೀಮಿತವಾಗದೇ ಅವರ ತತ್ವಾದರ್ಶವನ್ನು ನಾವು ಜೀವನದಲ್ಲಿ ಅಳಡಿಸಿಕೊಂಡಾಗ ಮಾತ್ರ ಜೀವನಕ್ಕೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಬಹುದು ಎಂದರು.


ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net