ಚಿತ್ರನಗರಿಗೆ ಭೂಮಿ ಕೊಟ್ಟ ರೈತರಿಗೆ ಅನ್ಯಾಯ

Oplus_16908288
ಇಮ್ಮಾವು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ನಡೆದ ರೈತರ ಸಭೆಯಲ್ಲಿ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿದರು.
Published on

ನಂಜನಗೂಡು: ತಾಲೂಕಿನ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಜಾಗದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಳೆದ 24 ದಿನಗಳಿಂದ ಸುತ್ತಮುತ್ತಲಿನ ರೈತರು ಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ರೈತ ಮುಖಂಡ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಸಭೆ ನಡೆಸಲಾಯಿತು.

2004 ರಲ್ಲಿ ಕೆಐಎಡಿಬಿ ನಂಜನಗೂಡು ತಾಲೂಕಿನ ಇಮ್ಮಾವು ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ 109 ಎಕರೆ ಜಾಗ ಸರ್ಕಾರಿ ಗೋಮಾಳವಾಗಿದೆ. ಇದೇ ಜಾಗದಲ್ಲಿ ಚಿತ್ರ ನಗರಿ ನಿರ್ಮಾಣಕ್ಕೆ ಕಾಯ್ದಿರಿಸುವ ಸರ್ಕಾರಿ ಗೋಮಾಳ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ಕೆಲವೇ ರೈತರಿಗೆ 1 ಎಕರೆ ಭೂಮಿಗೆ 4 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ ಸಾಗುವಳಿ ಮಾಡುತ್ತಿದ್ದ ಮೂಲ ರೈತರಿಗೆ ಪರಿಹಾರ ನೀಡದೆ ವಂಚಿಸಲಾಗಿದೆ. ಅಧಿಕಾರಿಗಳು ಬೇನಾಮಿ ದಾಖಲೆಗಳನ್ನು ಸೃಷ್ಟಿಸಿ ಮೂಲ ರೈತರಿಗೆ 18 ಕೋಟಿ ರೂ. ವಂಚಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂಲ ರೈತರಿಗೆ ನ್ಯಾಯ ಒದಗಿಸಬೇಕೆಂದು ಕಳೆದ 24 ದಿನಗಳಿಂದ ಅನಿರ್ದಿಷ್ಟ ಮುಷ್ಕರ ನಡೆಸಲಾಗುತ್ತಿದೆ.

ಶನಿವಾರ ತಾಲೂಕು ದಂಡಾಧಿಕಾರಿ ಕಚೇರಿಯಿಂದ ಬೇನಾಮಿ ಹೆಸರಿನಲ್ಲಿ ನೀಡಲಾಗಿರುವ ಪರಿಹಾರದ ದಾಖಲೆ ಪಟ್ಟಿ ದೊರೆತಿರುವ ಹಿನ್ನೆಲೆಯಲ್ಲಿ ಶನಿವಾರ ಸಭೆ ನಡೆಸಿದ ರೈತರು, ನಮ್ಮ ಗ್ರಾಮದವರಲ್ಲದ ಬೇರೆ ಬೇರೆ ದೂರದ ಗ್ರಾಮಗಳ ಜನರಿಗೆ ಪರಿಹಾರ ನೀಡಿರುವ 444 ಕುಟುಂಬಗಳಿಂದ ಪರಿಹಾರ ಹಿಂಪಡೆದು, ಅದನ್ನು ಮೂಲ ಸಾಗುವಳಿ ಪತ್ರ ಇರುವ ರೈತರಿಗೆ ನೀಡಬೇಕು. ಭೂಮಿ ಕಳೆದುಕೊಂಡ ರೈತರಿಗೆ ಚಿತ್ರನಗರಿಯಲ್ಲಿ ಕೆಲಸ ನೀಡಬೇಕು. ವಂಚಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಚಿತ್ರನಗರಿ ಸ್ಥಳದಿಂದ ಸಿಎಂ ಸಿದ್ದರಾಮಯ್ಯ ಅವರ ನಿವಾಸದವರೆಗೂ ಪಾದಯಾತ್ರೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಶಿರಮಳ್ಳಿ ಸಿದ್ದಪ್ಪ, ಉಗ್ರ ನರಸಿಂಹಗೌಡ, ಹೆಜ್ಜೆಗೆ ಪ್ರಕಾಶ್, ಪ್ರೇಮರಾಜ್, ಕರುಣಾಕರ್, ಮಹೇಶ್, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net