

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ.ದ.ರಾ.ಬೇಂದ್ರೆ ಧಾರವಾಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗರಿ ತಂದುಕೊಡುವುದರ ಜತೆಗೆ ಇಲ್ಲಿನ ಭಾಷೆ-ಸಂಸ್ಕೃತಿಯ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಬೇಂದ್ರೆ, ಕುವೆಂಪು, ಗೋಕಾಕರು ನವೋದಯದ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ಕೊಟ್ಟಿದ್ದಾರೆ. ಇಂತಹ ಸಾಹಿತಿ, ಕವಿಗಳ ವಿಚಾರ ಧಾರೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದು ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಇಲ್ಲಿನ ಬೇಂದ್ರೆ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರಾವಣ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಗೀತವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಪೂರ್ಣವಾಗುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಕವಿಗಳು, ಸಾಹಿತಿಗಳು ಹಾಗೂ ಸಂಗೀತಗಾರರ ಕುರಿತು ಹಾಡು, ಭಾಷಣ ಹಾಗೂ ನಿಬಂಧ ಸ್ಪರ್ಧೆಗಳನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಬೇಕಾಗಿದೆ ಎಂದರು.
ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕುವೆಂಪು ಅವರ ಎತ್ತರದಷ್ಟೇ ಸಾಹಿತ್ಯವನ್ನು ಬೇಂದ್ರೆಯವರು ರಚಿಸಿದ್ದರೂ ಬೇಂದ್ರೆಯವರ ಸಮಗ್ರ ಸಾಹಿತ್ಯದ ಸಂಪುಟಗಳು ಬರಲಿಲ್ಲ. ಧಾರವಾಡದ ಸಾಹಿತ್ಯ ಲೋಕ ಈ ಕುರಿತು ಆಲೋಚನೆ ಮಾಡಬೇಕಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಎಂ.ಲೋಕಾಪುರ, ಡಾ. ಶಾಂತಾರಾಮ ಹೆಗಡೆ, ಡಾ. ದೀಪಕ ಆಲೂರ, ಮಲ್ಲಿಕಾರ್ಜುನ ಚಿಕ್ಕಮಠ, ಡಾ.ಧನವಂತ ಹಾಜವಗೋಳ, ಡಾ.ಶೈಲಜಾ ಅಮರಶೆಟ್ಟಿ, ರಶ್ಮಿ ಕಾಖಂಡಕಿ, ಸಿ.ಸಿ. ಹಿರೇಮಠ, ಶಿವಾನಂದ ಹೂಗಾರ, ಎಸ್.ಎಸ್.ಬಂಗಾರಿಮಠ, ರಮೇಶ ಉಳ್ಳಾಗಡ್ಡಿ, ಎಂ.ಆರ್.ಕಬ್ಬೇರ, ಸುನೀಲ ಕುಲಕರ್ಣಿ, ಡಾ.ಶ್ರೀನಿವಾಸ ಕಾಂತನವರ, ನಾಗರತ್ನಾ ಹಡಗಲಿ, ಇತರರು ಇದ್ದರು.
ಮಲ್ಲಿಕಾರ್ಜುನ ಸೊಲಗಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಸತೀಶ ಜಾಧವ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.