

ಚಿಕ್ಕಮಗಳೂರು: ಸಮಾಜದ ಎಲ್ಲಾ ವರ್ಗದ ಜನರಿಗೆ ಕಾಯಕದ ಮೂಲಕ ತಮ್ಮ ಕುಲ ಕಸುಬುಗಳಿಗೆ ಮಹತ್ವ ನೀಡಿದ ಹಿನ್ನೆಲೆಯಲ್ಲಿ ಕಾಯಕಕ್ಕೆ ಒಂದು ಮೌಲ್ಯವನ್ನು ತಂದುಕೊಟ್ಟವರು ಬಸವಾದಿ ಶರಣರು ಎಂದು ಹಿರಿಯ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯವ್ಯಕ್ತಪಡಿಸಿದರು.
ನಗರದ ಕೋಟೆ ಬಡಾವಣೆಯ ಚನ್ನಾಪುರ ರಸ್ತೆಯಲ್ಲಿರುವ ಬಸವ ಬೆಳಕು ಮನೆಯಲ್ಲಿ ಗುರುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸಿಪಿಐ ಕಾರ್ಯದರ್ಶಿ ಎಸ್.ಎಲ್ ರಾಧ ಸುಂದರೇಶ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣಿಗೆ ದೈವಿಕ ಸ್ಥಾನವನ್ನು ಕಲ್ಪಿಸಿಕೊಟ್ಟವರು ಶರಣರು. ಮಹಿಳೆ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಎಸ್.ಎಲ್.ರಾಧ ಸುಂದರೇಶ್ ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಣಿ ಅವರ ಆಭರಣಗಳನ್ನು ಗಿರವಿ ಇಟ್ಟು ಕನ್ನಂಬಾಡಿ ಕಟ್ಟಿಸಿದರು. ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕ ರಾಜೇಂದ್ರ ಸ್ವಾಮಿಗಳು ಬಂಗಾರದ ಕರಡಿಗೆಯನ್ನು ಮಾರಾಟ ಮಾಡಿ ಬಡ ಮಕ್ಕಳಿಗೆ, ಅನಾಥ ಮಕ್ಕಳಿಗೆ ಶಿಕ್ಷಣ, ವಸತಿ ಕೊಟ್ಟು ನೆಲೆ ನಿಲ್ಲಲು ಶ್ರಮಿಸಿದರು ಎಂದು ತಿಳಿಸಿದರು.
ಕಾಯಕದಲ್ಲಿ ನುಲಿಯ ಚಂದಯ್ಯ ಕನ್ನಡವನ್ನು ದೇವರಿಗೆ ಕಲಿಸಿದರು. ಸಾಮಾನ್ಯ ಜನರಿಗೆ ಅರ್ಥ ಆಗುವ ಹಾಗೆ ವಚನಗಳನ್ನು ಕನ್ನಡದಲ್ಲೇ ರಚಿಸಿದವರು ವಿಶ್ವಗುರು ಬಸವಣ್ಣ ಎಂದು ಬಣ್ಣಿಸಿದರು.
ಎರಡು ಕೈಗಳಿಂದ ದುಡಿದು, ಒಂದು ಕೈಯಲ್ಲಿ ತಾವು ತಿಂದು, ಎರಡು ಕೈಯಲ್ಲಿ ಇನ್ನೊಬ್ಬರಿಗೆ ಕೊಡುವುದು ನಿಜವಾದ ಫಲ. ಇದು ಶ್ರಮಿಕರಿಗೆ ಸಲ್ಲಬೇಕು. ಪ್ರತಿಯೊಬ್ಬರೂ ದುಡಿಮೆಯಲ್ಲಿ ದೇವರನ್ನು ಕಾಣಬೇಕು ಎಂದು ಕರೆನೀಡಿದರು.
ನಿಸ್ವಾರ್ಥ ಸೇವೆ ಸಲ್ಲಿಸಿದ ದಿ. ಬಿ.ಕೆ ಸುಂದರೇಶ್ ಅವರ ಹೋರಾಟವನ್ನು ಸ್ಮರಿಸಿದ ಅವರು ಎಲ್ಲರೂ ಅವರಂತೆ ಸೇವೆ ಸಲ್ಲಿಸಬೇಕಾಗಿರುವುದು ಅಗತ್ಯ. ಜಿಲ್ಲೆಯ ಸಹಕಾರಿ ಸಂಸ್ಥೆ, ಖಾಸಗಿ ಸಹಭಾಗಿತ್ವದಲ್ಲಿ ನಡೆಸಿದ ಕೊಪ್ಪದ ಟಿ.ಸಿ.ಎಸ್ ಸಾರಿಗೆ ಸಂಸ್ಥೆಗೆ ವಿದೇಶದಿಂದ ಬಂದು ಭೇಟಿ ನೀಡುತ್ತಿದ್ದರು. ಇದು ಕಾಯಕಕ್ಕೆ ಇರುವ ಮಹತ್ವ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್, ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡುತ್ತಿz್ದೆÃವೆ. ಸನ್ಮಾನಕ್ಕಾಗಿ ಕಾರ್ಯಕ್ರಮಗಳಾಗದೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಬೇಕು. ನನಗೆ ಆತ್ಮೀಯವಾಗಿ ಹೃದಯಪೂರ್ವಕವಾಗಿ ಸನ್ಮಾನ ನೀಡಿದ ಎಲ್ಲರಿಗೂ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಸಮಾಜದಲ್ಲಿ ಗೌರವ ನೀಡುವುದು ಒಡವೆಯಲ್ಲ. ಬದಲಾಗಿ ನಾವು ನಿಭಾಯಿಸುವ ಜವಾಬ್ದಾರಿ ಗೌರವವನ್ನು ಹೆಚ್ಚು ಮಾಡುತ್ತದೆ. ಶರಣ ಸಾಹಿತ್ಯ ಪರಿಷತ್ ಬಳಗದೊಂದಿಗೆ ಸೇರಿ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸ ಮಾಡಲು ಇಂದಿನ ಸನ್ಮಾನ ಸ್ಪೂರ್ತಿಯಾಗಿದೆ ಎಂದರು.
ಸಾಹಿತಿ ರವೀಶ್ ಬಸಪ್ಪ ಮಾತನಾಡಿ, ದಲಿತರು, ಮಹಿಳೆಯರು, ಶೋಷಿತರ ಪರವಾಗಿ ಸಮಾನತೆ ಕುರಿತು ಜನರ ಕಷ್ಟಗಳ ಬಗ್ಗೆ ಅರಿತು ಅದನ್ನೇ ಬದುಕನ್ನಾಗಿಸಿಕೊಂಡವರು ಎಸ್.ಎಲ್.ರಾಧ ಸುಂದರೇಶ್ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕ ಪೂಜ್ಯರಾಜೇಂದ್ರ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕಾಗಿದೆ. ಪ್ರಸ್ತುತ ಭಾರತ ಸಂಕೋಲೆ, ಸಂಕಷ್ಟಗಳನ್ನು ಎದುರಿಸುತ್ತಿದೆ. ಅಸಮಾನತೆ ಹೊಸ ರೂಪ ಪಡೆದಿದೆ. ಸಮ ಸಮಾಜ ನಿರ್ಮಾಣ ಮಾಡುವುದು ಶರಣ ಸಾಹಿತ್ಯದ ಉz್ದÉÃಶ ಎಂದು ಹೇಳಿದರು.
ಮನುಷ್ಯ ಸಮಾಜವನ್ನು ಒಲವಿನ ಸಮಾಜವನ್ನಾಗಿ ಕಟ್ಟಿದವರು ಶರಣರು. ಇತ್ತೀಚೆಗೆ ದೊಡ್ಡ ಕಾರ್ಯಕ್ರಮಗಳು ಅರ್ಥಪೂರ್ಣವಾಗದೇ ತೋರ್ಪಡಿಕೆಗಾಗಿ ನಡೆಯುತ್ತಿವೆ ಎನ್ನುವುದು ವಿಷಾಧಕರ ಸಂಗತಿ. ಆದರೆ ಶರಣ ಸಾಹಿತ್ಯ ಪರಿಷತ್ ಆತ್ಮ ಸಂತೋಷಕ್ಕಾಗಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಡಿಎಸ್‌ಎಸ್ ಮುಖಂಡರಾದ ಮರ್ಲೆ ಅಣ್ಣಯ್ಯ, ಪ್ರಭು, ಓಂಕಾರಪ್ಪ, ಲಕ್ಷö್ಮಣ, ಚಂದ್ರಣ್ಣ, ಮಂಜಣ್ಣ, ನಟರಾಜ್, ನಿಜಗುಣ, ಕಾಂತ, ಸಂತೋಷ್ ಮತ್ತಿತರರಿದ್ದರು.