ವಿಮಾನ ನಿಲ್ದಾಣದ ನಿರ್ವಹಣೆ ಸರ್ಕಾರಕ್ಕೆ ವಹಿಸಿದ್ದೆ ದೊಡ್ಡ ತಪ್ಪು

shimogga airport
Published on

ಶಿವಮೊಗ್ಗ: ಸೋಗಾನೆಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಿಮಾನಯಾನ ಪ್ರಾಧಿಕಾರದ ಬದಲು ರಾಜ್ಯ ಸರ್ಕಾರಕ್ಕೆ ವಹಿಸಿದ್ದೆ ನಾನು ಮಾಡಿದ ದೊಡ್ಡ ತಪ್ಪು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನ ವೈಪರಿತ್ಯ ಕಾರಣದಿಂದ ಶುಕ್ರವಾರ ಬೆಂಗಳೂರಿನಿಂದ ಬಂದ ನಾನು ಪ್ರಯಾಣಿಸುತ್ತಿದ್ದ ವಿಮಾನವು ಶಿವಮೊಗ್ಗದಲ್ಲಿ ಲ್ಯಾಂಡ್ ಆಗದೆ ಹುಬ್ಬಳಿಗೆ ತೆರಳಿತ್ತು. ಅಲ್ಲಿಂದ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬರಬೇಕಾಯಿತು. ಶಿವಮೊಗ್ಗದಲ್ಲೇ ವಿಮಾನ ನಿಲ್ದಾಣವಿದ್ದರೂ ಬೇರೊಂದು ಕಡೆ ಹೋಗಿ ಬರಬೇಕಾದ ದುಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ ಎಂದು ಕಿಡಿಕಾರಿದರು.

ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿಬಿಟ್ಟೇವು. ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಿದ್ದರೆ ಎಲ್ಲ ಕೆಲಸಗಳು ಸುಗಮವಾಗುತ್ತಿದ್ದವು. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಪೂರಕವಾದ ಉಪಕರಣಗಳನ್ನು ತಂದಿರಿಸಿ ಮೂರು ತಿಂಗಳಾಗಿದೆ. ಅವುಗಳ ಅಳವಡಿಕೆಗೆ ರಾಜ್ಯ ಸರ್ಕಾರ 2ರಿಂದ 3 ಕೋಟಿ ರೂ. ಕೊಡಬೇಕಿದೆ. ಟೆಂಡರ್ ಕರೆಯಲು ವಿಳಂಬವಾಗುತ್ತಿದ್ದು, ಅದರ ಬದಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರೆ ಟೆಂಡರ್ ರಹಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದರು. ಸರ್ಕಾರ ಒಂದು ಕೋಟಿ ರೂ. ಕೊಡಲು ಸಂಪುಟ ಸಭೆ ನಡೆಸಬೇಕು ಎನ್ನುತ್ತಿದೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ ಕೆಲಸ ಆರಂಭಿಸಲೂ ವಿಳಂಬವಾಗುತ್ತಿದೆ. ಇದರಿಂದ ನಮಗೆ ದೊರೆಯಬೇಕಿದ್ದ ಅವಕಾಶವನ್ನು ಬೇರೆಯವರ ಪಾಲಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಕೂಡಲೆ ನೈಟ್ ಲ್ಯಾಂಡಿಂಗ್ ಉಪಕರಣಗಳನ್ನು ಅಳವಡಿಸಿಕೊಡಬೇಕು. ಆ ಬಳಿಕ ದೆಹಲಿಯಲ್ಲಿ ಚರ್ಚೆ ನಡೆಸಿ ಮತ್ತಷ್ಟು ವಿಮಾನಗಳನ್ನು ತರಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲವಾದಲ್ಲಿ ಇಂತಹ ಮೋಡದ ವಾತಾವರಣ ಇದ್ದರೆ ಅನೇಕ ವಿಮಾನಗಳು ರದ್ದಾಗುವ ಸಾಧ್ಯತೆ ಇರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net