

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ಸಂಗೀತವನ್ನು ಮನನ ಮಾಡಿಕೊಳ್ಳಲು ಸಾಧ್ಯ ಎಂಬುದಾಗಿ ಖ್ಯಾತ ವೈದ್ಯ ಮತ್ತು ಮೃದಂಗ ವಾದಕ ಡಾ.ಶಂಕರರಾಜ್ ಆಲಂಪಾಡಿ ತಿಳಿಸಿದ್ದಾರೆ.
ಕಾಸರಗೋಡಿನ ಖ್ಯಾತ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆ ರಂಗ ಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾಸರಗೋಡಲ್ಲಿ ಆಯೋಜಿಸಲಾದ ಭಕ್ತಿಗೀತೆಗಳ ಗಾಯನ ’ಭಕ್ತಿ ತೀರ್ಥ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖ್ಯಾತ ಹರಿದಾಸ, ವಕೀಲ ಶಂನಾಡಿಗ ಕುಂಬಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಕೀಲ ಸಿ.ಎನ್.ಅಶೋಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗಾಯಕರಾದ ಮೂಲ್ಕಿ ರವೀಂದ್ರ ಪ್ರಭು ಪ್ರಾರ್ಥನೆ ಹಾಡಿದರು. ರಂಗ ಚಿನ್ನಾರಿಯ ನಿರ್ದೇಶಕ, ’ಭಕ್ತಿ ತೀರ್ಥ’ದ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ತುಳು ಸಿನಿಮಾ ನಿರ್ಮಾಪಕ ಟಿ.ಎ. ಶ್ರೀನಿವಾಸ, ರಂಗ ಚಿನ್ನಾರಿಯ ನಿರ್ದೇಶಕ ಕೆ. ಸತ್ಯನಾರಾಯಣ, ಕಾರ್ಯದರ್ಶಿ ಕಿಶೋರ್ ಪೆರ್ಲ ಉಪಸ್ಥಿತರಿದ್ದರು.
ಖ್ಯಾತ ಗಾಯಕರಾದ ಅರವಿಂದ ಆಚಾರ್ಯ ಮಾಣಿಲ, ಖ್ಯಾತ ಹಿಂದುಸ್ತಾನಿ ಗಾಯಕರಾದ ಪಂಡಿತ್ ಕೃಷ್ಣೇಂದ್ರ ವಾಡೆಕರ್, ಮೂಲ್ಕಿ ರವೀಂದ್ರ ಪ್ರಭು ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಹಾರ್ಮೋನಿಯಂನಲ್ಲಿ ಗಣಪತಿ ಪ್ರಭು ಮೂಲ್ಕಿ, ತಬ್ಲಾದಲ್ಲಿ ರಾಜೇಶ್ ಭಾಗವತ್, ತಾಳದಲ್ಲಿ ಸ್ವಯಂ ಪ್ರಭು, ಪಾಂಡುರಂಗ ಭಟ್ ಸಹಕರಿಸಿದರು.