ಶಿರಸಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ, ಸಂಜೆವರೆಗೂ ಕಾಗದಪತ್ರಗಳ ಪರಿಶೀಲನೆ

3sirsi1 IT RAID
Published on

ಶಿರಸಿ: ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹೊಸ್ತಿಲಲ್ಲೇ ನಗರದ ವಿವಿಧ ಗಣ್ಯರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಇಲ್ಲಿಯ ಕಾಂಗ್ರೆಸ್ ಧುರೀಣ, ಜಿಲ್ಲಾ ಮಾಧ್ಯಮ ವಕ್ತಾರ ದೀಪಕ ದೊಡ್ಡೂರು ಅವರ ಎಪಿಎಂಸಿ ಆವರಣದಲ್ಲಿರುವ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಸಂಜೆಯವರೆಗೂ ಕಾಗದಪತ್ರಗಳ ಪರಿಶೀಲನೆ ನಡೆಸಿದೆ.

ಎಪಿಎಂಸಿ ಆವರಣದಲ್ಲಿಯೇ ಇರುವ ಟಿಎಸ್​ಎಸ್ ಮಾಜಿ ವ್ಯವಸ್ಥಾಪಕ ರವೀಶ ಹೆಗಡೆ ಅವರ ಮನೆ ಮೇಲೂ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಅದೇ ರೀತಿ ಟಿಎಸ್​ಎಸ್ ಮಾಜಿ ಉದ್ಯೋಗಿ ಅನಿಲ ಮುಷ್ಟಗಿ ಅವರ ಯಲ್ಲಾಪುರ ರಸ್ತೆಯಲ್ಲಿರುವ ಮನೆ, ಟಿಎಸ್​ಎಸ್ ನಿರ್ದೇಶಕ ರಾಮಕೃಷ್ಣ ಹೆಗಡೆ ಕಡವೆಯವರ ಯಲ್ಲಾಪುರ ರಸ್ತೆಯಲ್ಲಿರುವ ಮನೆ, ಟಿಎಸ್​ಎಸ್​ನಲ್ಲಿ ಅಡಕೆ ವಹಿವಾಟು ನಡೆಸುತ್ತಿದ್ದ ಪ್ರವೀಣ ಹೆಗಡೆ ಹೀಪನಳ್ಳಿ ಅವರ ವಿನಾಯಕ ಕಾಲನಿಯ ಮನೆ ಹಾಗೂ ಅಡಕೆ ವ್ಯಾಪಾರಿ ಶಿವರಾಮ ಹೆಗಡೆ ಅವರ ಅಡಕೆ ಮಂಡಿಯ ಮೇಲೆ ದಾಳಿ ನಡೆಸಲಾಗಿದೆ.

ಹುಬ್ಬಳ್ಳಿ, ಮಂಗಳೂರು ಮತ್ತು ಕಾರವಾರ ಕಚೇರಿಯ ಆದಾಯ ತೆರಿಗೆ ಇಲಾಖೆಯ 20ಕ್ಕೂ ಅಧಿಕ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.

ನಗರದ ಪ್ರತಿಷ್ಠಿತ ಅಡಕೆ ವಹಿವಾಟು ಸಂಸ್ಥೆ ಟಿಎಸ್​ಎಸ್ ಆಡಳಿತ ಮಂಡಳಿ ಈ ವರ್ಷ ಬದಲಾಗಿದ್ದು, ಹೊಸ ಆಡಳಿತ ಮಂಡಳಿ ಬಂದ ಬಳಿಕ ರವೀಶ ಹೆಗಡೆ ಸೇರಿ ಅನೇಕರನ್ನು ಸಂಸ್ಥೆಯ ಸೇವೆಯಿಂದ ಹೊರಗಿಟ್ಟಿದೆ. ಹಿಂದಿನ ಅವಧಿಯಲ್ಲಿ ಆದ ಅವ್ಯವಹಾರಗಳ ಬಗ್ಗೆ ಸಂಸ್ಥೆ ಸಹ ಆಂತರಿಕ ತನಿಖೆ ನಡೆಸುತ್ತಿದೆ. ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದವರಲ್ಲಿ ಹಿಂದೆ ಟಿಎಸ್​ಎಸ್ ನಲ್ಲಿ ಕಾರ್ಯ ನಿರ್ವಹಿಸಿದವರು, ವಹಿವಾಟು ನಡೆಸಿದವರೇ ಹೆಚ್ಚಿದ್ದಾರೆ. ಇನ್ನೊಂದೆಡೆ ಇವರಲ್ಲಿ ಹಲವರು ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿಯೂ ಗುರುತಿಸಿಕೊಂಡವರಾಗಿದ್ದಾರೆ. ಹೀಗಾಗಿ ಚುನಾವಣೆಯ ಹೊಸ್ತಿಲಿಲ್ಲಿ ನಡೆದಿರುವ ಈ ದಾಳಿ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net