

ಆನೇಕಲ್
ಬೊಮ್ಮಸಂದ್ರ ಪುರಸಭೆ ಸದಸ್ಯರಾದ ಎ.ಛಲಪತಿ ಮತ್ತು ಎ.ಪ್ರಸಾದ್ ಅವರ ಮನೆ, ಫಾರ್ಮ್ ಹೌಸ್ ಮತ್ತು ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಬೆಳಗ್ಗೆ ದಾಳಿ ನಡೆಸಿ ವಿವಿಧ ದಾಖಲೆಗಳ ಪರಿಶೀಲಿಸಿದರು.
ಕಾರುಗಳಲ್ಲಿ ಬೆಳಗ್ಗೆ 6ಕ್ಕೆ ಆಗಮಿಸಿದ 13 ಮಂದಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೊಮ್ಮಸಂದ್ರದ ಛಲಪತಿ ಮತ್ತು ಪ್ರಸಾದ್ ಅವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದರು. ಸಂಜೆ 6.30 ರವರೆಗೂ ಸತತ 12 ಗಂಟೆಗಳಿಗೂ ಹೆಚ್ಚು ಕಾಲ ದಾಖಲೆ ಪರಿಶೀಲಿಸಿದರು.
ಪುರಸಭೆ ಬಿಜೆಪಿ ಸದಸ್ಯರಾಗಿರುವ ಎ.ಪ್ರಸಾದ್ ಮತ್ತು ಛಲಪ್ರಸಾದ್ ಅವರು ಕೈಗಾರಿಕೋದ್ಯಮಿಗಳಾಗಿದ್ದಾರೆ. ಪ್ರಸಾದ್ ಅವರು ಬೊಮ್ಮಸಂದ್ರ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದಾರೆ. ಕೆಲ ವರ್ಷಗಳಿಂದ ಕಾಂಗ್ರೆಸ್‌ನೊಂದಿಗೆ ಪ್ರಸಾದ್ ಮತ್ತು ಛಲಪತಿ ಗುರುತಿಸಿಕೊಂಡಿದ್ದರು.
ಐಟಿ ದಾಳಿ ಹಿನ್ನೆಲೆಯಲ್ಲಿ ಪ್ರಸಾದ್ ಮತ್ತು ಛಲಪತಿ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸಿದ್ದರು. ಚುನಾವಣೆ ಸಮೀಪದಲ್ಲಿರುವಾಗ ಕಾಂಗ್ರೆಸ್‌ಗೆ ಬೆಂಬಲ ನೀಡಿದ ನಾಯಕರ ಮೇಲೆ ನಡೆಸಿದ ಐಟಿ ದಾಳಿ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿತ್ತು.
ಹಲವಾರು ದಾಖಲೆಗಳ ಪರಿಶೀಲನೆ: ಪ್ರಸಾದ್ ಅವರ ಪೂಮಾ ಕಂಪನಿ, ನಿವಾಸ, ಕಚೇರಿ ಹಾಗೂ ಮನೆಗಳಲ್ಲಿನ ಹಲವಾರು ದಾಖಲೆಗಳ ಪರಿಶೀಲನೆ ನಡೆಸಿದ್ದು, ಕೆಲ ಪ್ರಮುಖ ಕಡತ ಹಾಗೂ ಮನೆಯಲ್ಲಿದ್ದ ನಗದನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಹೊಸೂರು- ಬೆಂಗಳೂರು ಮುಖ್ಯ ರಸ್ತೆ ಸಮೀಪದ ಆರ್.ಎಸ್.ಗಾರ್ಡೇನಿಯಾ ಬಡಾವಣೆಯಲ್ಲಿರುವ ಛಲಪತಿ ಅವರ ನಿವಾಸದಲ್ಲಿ ಪರಿಶೀಲಿಸಿದ್ದಾರೆ.
ಪುರಸಭೆ ಅಧ್ಯಕ್ಷರಿಂದಲೂ ಮಾಹಿತಿ ಸಂಗ್ರಹ: ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಗೋಪಾಲ್ ಅವರನ್ನು ಎ. ಛಲಪತಿ ಅವರ ನಿವಾಸಕ್ಕೆ ಕರೆಸಿಕೊಂಡಿದ್ದ ಐಟಿ ಅಧಿಕಾರಿಗಳು ಕೆಲ ಮಾಹಿತಿ ಪಡೆದುಕೊಂಡರು.
ಪೊಲೀಸ್ ಭದ್ರತೆ: ಐಟಿ ದಾಳಿ ಹಿನ್ನೆಲೆ ಮನೆಯ ಬಳಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹೆಬ್ಬಗೋಡಿ ಹಾಗೂ ಸೂರ್ಯನಗರ ಪೊಲೀಸರಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.