

ಬೆಂಗಳೂರು: ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಬೇಟೆ ಶುರು ಮಾಡಿದ್ದಾರೆ. ಐದು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ 23 ಬಾಕ್ಸ್ ನಲ್ಲಿದ್ದ ಕೋಟ್ಯಂತರ ರೂ.ಹಣ ಸೀಜ್ ಆಗಿದ್ದು, ದುಡ್ಡಿನ ರಾಶಿ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ. ಆರ್ಟಿ ನಗರದ ಆತ್ಮಾನಂದ ಕಾಲನಿಯಲ್ಲಿ ಈ ಹಣ ಪತ್ತೆಯಾಗಿದೆ.
ಮಾಜಿ ಕಾರ್ಪೋರೆಟರ್ ಅಶ್ವತ್ಥಮ್ಮ ಮನೆ ಮೇಲೂ ಐಟಿ ದಾಳಿ ನಡೆಸಿದೆ. ಅಶ್ವತ್ಥಮ್ಮ-ಅಂಬಿಕಾಪತಿ ದಂಪತಿ ಮನೆ ಮೇಲೆ ರೇಡ್ ಮಾಡಲಾಗಿದೆ. ಅಂಬಿಕಾಪತಿ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಗಂಡ ಹಾಗೂ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದಾರೆ.
ಅಶ್ವಥಮ್ಮ ಅವರ ಸಂಬಂಧಿಯೊಬ್ಬರಿಗೆ ಸೇರಿದ ಫ್ಲಾಟ್ನಲ್ಲಿ ಹಣ ಪತ್ತೆಯಾಗಿದೆ. ಫ್ಲಾಟ್ನ ರೂಂನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಸುಮಾರು 40 ಕೋಟಿಗೂ ಅಧಿಕ ಹಣ ಇರುವ ಸಾಧ್ಯತೆಯಿದ್ದು, ಹಣಕ್ಕೆ ಸಂಬಂಧಿಸಿದಂತೆ ಕೆಲವರ ವಿಚಾರಣೆ ನಡೆಸಲಾಗಿದೆ. ಫ್ಲಾಟ್ನಲ್ಲಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯದ ಐಟಿ ದಾಳಿಗಳಲ್ಲಿ ಅತಿದೊಡ್ಡ ಮೊತ್ತದ ಹಣ ಐಟಿ ಪತ್ತೆ ಹಚ್ಚಿದೆ. ಪಂಚರಾಜ್ಯಗಳ ಚುನಾವಣೆ ಘೋಷಣೆ ಬೆನ್ನಲ್ಲೆ ನಗರದಲ್ಲಿ ಭಾರಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಹಣ ಎಲ್ಲಿಗೆ ಸಾಗಾಟವಾಗ್ತಾ ಇತ್ತು, ಯಾರಿಗೆ ಸೇರಿದ್ದು, ಎಲ್ಲಿಂದ ಬಂದಿತ್ತು ಅನ್ನೋ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
42 ಕೋಟಿ ಹಣವನ್ನು ಐಟಿ ಅಧಿಕಾರಿಗಳು ಸೀಝ್ ಮಾಡಿದ್ದು, ಹಣದ ದೃಶ್ಯಾವಳಿಯನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಇಡಿ ಅಧಿಕಾರಿಗಳಿಗೆ ಐಟಿ ಈಗಾಗಲೇ ಮಾಹಿತಿ ನೀಡಿದೆ. ಮನಿಲ್ಯಾಂಡ್ರಿಂಗ್ ಕೇಸ್ ಅಲ್ಲಿ ಪ್ರಕರಣ ದಾಖಲು ಮಾಡಲು ಇಡಿ ತಯಾರಿ ನಡೆಸಿದೆ. ಆತ್ಮಾನಂದ ಕಾಲನಿಯ ಒಂದು ಫ್ಲ್ಯಾಟ್ ಮೇಲೆ ಈ ಐಟಿ ದಾಳಿ ನಡೆದಿದೆ. ಫ್ಲ್ಯಾಟ್ನಲ್ಲಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಪತ್ತೆಯಾದ ಹಣದ ಒಟ್ಟಾರೆ ಮೊತ್ತವನ್ನು ಐಟಿ ಅಧಿಕಾರಿಗಳು ಎಣಿಕೆ ಮಾಡಿದ್ದಾರೆ.
ಇದೇ ವೇಳೆ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ನಿವಾಸದ ಮೇಲೂ ಐಟಿ ದಾಳಿ ನಡೆಸಿದೆ. ಗಣೇಶ ಬ್ಲಾಕ್ ನ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ದಾಳಿ ನಡೆದಿದ್ದು, ದಾಳಿ ಮಾಡಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಸಂಜೆ 7 ರಿಂದ ಇಲ್ಲಿಯವರೆಗೂ ಕೂಡ ಅಧಿಕಾರಿಗಳು ಪರಿಶೀಲನೆಯಲ್ಲಿ ನಿರತರಾಗಿದ್ದು, ಬಗೆದಷ್ಟು ಆಳ ಕಾಣುತ್ತಿದೆ. ಈಗಾಗ್ಲೇ 26 ಪಟ್ಟಿಗೆಯಲ್ಲಿ ಇದ್ದ ಹಣವನ್ನ ಅಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಇನ್ನು ಅದೆಷ್ಟು ಅಕ್ರಮ ಹಣ ಐಟಿ ಬಲೆಗೆ ಬೀಳುತ್ತು ಕಾದು ನೋಡ್ಬೇಕು.