

ಬೆಂಗಳೂರು ಗ್ರಾಮಾಂತರ: ದಾಖಲೆಗಳು ಸರಿಯಾಗಿಲ್ಲ ಎಂಬ ನೆಪ ಹೇಳಿ ವಾಹನ ಸಮೇತ, ಮೆಣಸಿನಕಾಯಿ ಚೀಲಗಳನ್ನು ಜಪ್ತಿ ಮಾಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮೂರು ದಿನವಾದರೂ ಕಚೇರಿಗೆ ಬಾರದಿರುವುದರಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಆಂಧ್ರದ ಮಂತ್ರಾಲಯ ತಾಲೂಕಿನ ಕೌತಳಂ ಗ್ರಾಮದ ರೈತರು ಬ್ಯಾಡಗಿ, ಕಲಬುರಗಿ, ಯಾದಗಿರಿಯಲ್ಲಿ ಶೀತಲೀಕರಣ ಘಟಕಗಳು ಭರ್ತಿಯಾಗಿದ್ದರಿಂದ ತಮಿಳುನಾಡಿನ ಧರ್ಮಪುರಿಯಲ್ಲಿರುವ ಶೀತಲೀಕರಣ ಘಟಕಕ್ಕೆ 302 ಚೀಲ ಬ್ಯಾಡಗಿ ಮೆಣಸಿನಕಾಯಿ ತುಂಬಿಕೊಂಡು ಏ.2ರಂದು ಬೆಳಗಿನ ಜಾವ ಸಾಗಿಸುತ್ತಿದ್ದಾಗ ದೇವನಹಳ್ಳಿ ಬಳಿ ಅಧಿಕಾರಿಗಳು ದಾಖಲೆಗಳು ಸರಿಯಿಲ್ಲ ಎಂಬ ನೆಪ ಹೇಳಿ ಮೆಣಸಿನಕಾಯಿ ಸಮೇತ ವಾಹನ ಜಪ್ತಿ ಮಾಡಿದ್ದಾರೆ. ಜಮೀನು ಪತ್ರ, ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ನೀಡಿರುವ ಮನವಿ ಪತ್ರ ನೀಡಿದರೂ, ಅದನ್ನು ಪರಿಗಣಿಸಿಲ್ಲ. ಊಟ, ನೀರು ಬಿಟ್ಟು ರೈತರು ವಾಣಿಜ್ಯ ತೆರಿಗೆ ಇಲಾಖೆ ಆವರಣದಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆೆ. ಬಿಸಿಲಿಗೆ ಮೆಣಸಿನಕಾಯಿ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ಸ್ಥಳೀಯರ ಕಾಲುಗಳನ್ನು ಹಿಡಿದು ಮೆಣಸಿನಕಾಯಿ ಬಿಡಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ.
ಕೋರಮಂಗಲ ಎಲ್ಲಿದೆ ಗೊತ್ತಿಲ್ಲ: ಮಂಗಳವಾರ ಮುಂಜಾನೆ ಬೆಂಗಳೂರಿನ ಕೋರಮಂಗಲ ವಾಣಿಜ್ಯ ಕಚೇರಿಯ ವಿಜಿಲೆನ್ಸ್ ಅಧಿಕಾರಿಗಳು ಮೆಣಸಿನಕಾಯಿ ಜಪ್ತಿ ಮಾಡಿ, ಇಲ್ಲಿಗೆ ತಂದು ಬಿಟ್ಟಿದ್ದಾರೆ. ಈ ವಿಚಾರದಲ್ಲಿ ದೇವನಹಳ್ಳಿ ಕಚೇರಿಗೆ ಸಂಬಂಧವಿಲ್ಲ. ಯಾವ ಅಧಿಕಾರಿ ಪ್ರಕರಣ ದಾಖಲಿಸಿದ್ದಾರೋ ಅವರೇ ಅದನ್ನು ನಿರ್ವಹಣೆ ಮಾಡುತ್ತಾರೆ. ಏನಿದ್ದರೂ ಕೋರಮಂಗಲಕ್ಕೆ ಹೋಗಿ ವಿಚಾರಿಸಿ ಎಂದು ದೇವನಹಳ್ಳಿಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಅಧಿಕಾರಿಗಳು ಏನು ಮಾಡಬೇಕೆಂದು ತಿಳಿಸುತ್ತಿಲ್ಲ. ಕೋರಮಂಗಲ ಎಲ್ಲಿದೆ ಎಂಬುದು ನಮಗೆ ಗೊತ್ತಿಲ್ಲ. ಇದನ್ನೇ ನಂಬಿಕೊಂಡು ಊರಿನಲ್ಲಿ ಕುಟುಂಬಗಳು ಎದುರು ನೋಡುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳು ನಾಪತ್ತೆ ರೈತರ ಸಂಕಷ್ಟ ನೋಡಿ, ಸ್ಥಳೀಯರು ಅಧಿಕಾರಿಗೆ ಪೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ದೇವನಹಳ್ಳಿ ಕಚೇರಿ ಅಧಿಕಾರಿಗಳು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.