ಐಟಿ ಕಚೇರಿ ಉಳಿಸಲು ಪ್ರಯತ್ನ: ಸಚಿವ ಡಿ.ವಿ.ಸದಾನಂದ ಗೌಡ

manavi new
Published on

ಮಂಗಳೂರು: ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿ(ಪಿಸಿಐಟಿ)ಯನ್ನು ಗೋವಾದ ಪಣಜಿಗೆ ಸ್ಥಳಾಂತರಿಸದೆ ಇಲ್ಲೇ ಉಳಿಸಿಕೊಳ್ಳುವುದು ನಮ್ಮ ಗುರಿ, ಈ ಬಗ್ಗೆ ಕೇಂದ್ರ ವಿತ್ತ ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಶನಿವಾರ ನಗರದ ಅವರ ನಿವಾಸದಲ್ಲಿ ಭಾರತೀಯ ಲೆಕ್ಕಪರಿಶೋಧಕರ ಸಂಘ(ಐಸಿಎಐ)ದ ಪದಾಧಿಕಾರಿಗಳು ಅಧ್ಯಕ್ಷ ಎಸ್.ಎಸ್.ನಾಯಕ್ ಅವರ ನೇತೃತ್ವದಲ್ಲಿ ಭೇಟಿಯಾಗಿ, ಪಿಸಿಸಿಟಿ ಕಚೇರಿಯನ್ನು ಇಲ್ಲೇ ಉಳಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.

ಈ ಕುರಿತು ಐಸಿಎಐ ಪ್ರತಿನಿಧಿಗಳು ನೀಡಿರುವ ಮನವಿ ಅತ್ಯಂತ ನ್ಯಾಯಯುತವಾಗಿದೆ. ಈಗಾಗಲೇ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ, 4 ಲಕ್ಷಕ್ಕೂ ಹೆಚ್ಚು ತೆರಿಗೆಪಾವತಿದಾರರಿರುವ ಈ ಕಚೇರಿಯನ್ನು ಪಣಜಿಗೆ ಹಠಾತ್ ಸ್ಥಳಾಂತರಿಸುವುದು ಸೂಕ್ತವಲ್ಲ, ವಿತ್ತ ಸಚಿವರೊಂದಿಗೆ ಮತ್ತೆ ಸೋಮವಾರ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಮಂಗಳೂರು ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) (ಪಿಸಿಐಟಿ) ಕಚೇರಿಯ ವ್ಯಾಪ್ತಿಗೆ ದಕ್ಷಿಣ ಕನ್ನಡ, ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಗಳು ಬರುತ್ತವೆ, ಸುಮಾರು 5 ಲಕ್ಷ ತೆರಿಗೆ ಪಾವತಿದಾರರನ್ನು ಒಳಗೊಂಡು ವಾರ್ಷಿಕ 4 ಸಾವಿರ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸುತ್ತದೆ.

ಇದಕ್ಕಿಂತ ಕಡಿಮೆ ವ್ಯಾಪ್ತಿ ಹೊಂದಿರುವ ಹುಬ್ಬಳ್ಳಿಯ ಪಿಸಿಐಟಿ ಕಚೇರಿಯನ್ನು ಅಲ್ಲಿನವರು ಪ್ರತಿರೋಧವೊಡ್ಡಿ ಉಳಿಸಿಕೊಂಡಿದ್ದಾರೆ, ನಮ್ಮ ವ್ಯಾಪ್ತಿ ದೊಡ್ಡದಿರುವುದರಿಂದ ಮಂಗಳೂರಿನ ಈ ಕಚೇರಿ ಉಳಿಸಿಕೊಳ್ಳುವ ಬೇಡಿಕೆ ನ್ಯಾಯಯುತವಾಗಿದೆ ಎಂದು ಒತ್ತಾಯಿಸಲಾಯಿತು.

ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮಂಗಳೂರು ಅಧ್ಯಕ್ಷ ಐಸಾಕ್ ವಾಸ್, ಐಸಿಎಐನ ಉಡುಪಿ ಶಾಖೆಯ ಅಧ್ಯಕ್ಷ ಪ್ರದೀಪ್ ಜೋಗಿ, ಕಾರ್ಯದರ್ಶಿ ಲೋಕೇಶ್, ಸಿಎಗಳಾದ ಸುದೇಶ್ ರೈ, ಅನಂತ ಪದ್ಮನಾಭ, ಅಬ್ದುರ್ ರಹಮಾನ್ ಮುಸ್ಬಾ ಮತ್ತು ಮಹಿಳಾ ಪ್ರತಿನಿಧಿ ಯಶಸ್ವಿನಿ ಕೆ ಅಮೀನ್ ಉಪಸ್ಥಿತರಿದ್ದರು.

ಗೆಜೆಟ್ ಅಧಿಸೂಚನೆ: ಕೇಂದ್ರ ಮಂಡಳಿಯ ನೇರ ತೆರಿಗೆಗಳ ಅಧಿಕೃತ ಗೆಜೆಟ್ ಅಧಿಸೂಚನೆ ಪ್ರಕಾರ ಪಿಸಿಐಟಿ ಮಂಗಳೂರು ಕಚೇರಿಯನ್ನು ರದ್ದುಗೊಳಿಸಿ ಗೋವಾದ ಪಣಜಿಗೆ ಸ್ಥಳಾಂತರಿಸಲಾಗಿದೆ. ಕಚೇರಿ ಮಂಗಳೂರಿನಿಂದ ಗೋವಾಕ್ಕೆ ಸ್ಥಳಾಂತರಗೊಳ್ಳುವುದರಿಂದ ತೆರಿಗೆದಾರರಿಗೆ ಅನಗತ್ಯ ತೊಂದರೆ ಉಂಟಾಗುತ್ತದೆ. ಮಂಗಳೂರು ಅನೇಕ ವ್ಯವಹಾರಗಳು, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ, ಆಸ್ಪತ್ರೆಗಳು, ಟ್ರಸ್ಟ್‌ಗಳು ಇತ್ಯಾದಿಗಳ ಕೇಂದ್ರವಾಗಿದೆ. ಪಿಸಿಐಟಿ ಕಚೇರಿಯನ್ನು ಬದಲಾಯಿಸುವುದರಿಂದ ಅನೇಕ ಪ್ರಾತಿನಿಧ್ಯಗಳು, ಅನುಮೋದನೆಗಳು ಮತ್ತು ಇತರ ಆದಾಯ ತೆರಿಗೆ ಕಾರ್ಯವಿಧಾನಗಳಲ್ಲಿ ವಿಳಂಬವಾಗುತ್ತದೆ ಎಂದು ಸಚಿವರಲ್ಲಿ ತಿಳಿಸಿ ಕೇಂದ್ರ ಸರ್ಕಾರ ಈ ಕ್ರಮವನ್ನು ರದ್ದುಗೊಳಿಸುವಲ್ಲಿ ಸಹಕಾರ ನೀಡುವಂತೆ ಐಸಿಎಐ ವತಿಯಿಂದ ಕೇಳಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net