ಶಿಕ್ಷಕರು ಸೂಕ್ಷ್ಮತೆ ಕಳೆದುಕೊಂಡರೆ ಕಷ್ಟ : ಶಿಕ್ಷಣ ಸಚಿವ ಸುರೇಶ್‌ಕುಮಾರ್

25TMK_Sureshkumar_Ashrama
Published on

ತುಮಕೂರು: ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರೇ ಸರ್ಕಾರಿ ಶಾಲೆಗಳ ಮುಂದೆ ನಿಲ್ಲುವ ಸ್ಥಿತಿ ನಿರ್ಮಾಣವಾಗಬೇಕು, ಈ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಸಲಹೆಯಿತ್ತರು.

ನಗರದ ರಾಮಕೃಷ್ಣ ಆಶ್ರಮದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪಕ್ಕೆಲುಬು ಪದದಿಂದ ಅಮಾನತುಗೊಂಡ ಶಿಕ್ಷಕ ಶಿಕ್ಷೆ ರದ್ದು ಕೋರಿ ನನ್ನ ಬಳಿ ಬಂದಿದ್ದರು. ಅಮಾನತು ವಾಪಸು ಪಡೆಯಿರಿ ಎಂದರು. ಮುಖದಲ್ಲಿ ತಪ್ಪು ಮಾಡಿರುವ ಭಾವನೆ ಇರಲಿಲ್ಲ ಎಂದು ಬೇಸರಿಸಿದರು. ಇದಾದ ಬಳಿಕ ಪುಳಿಯೋಗರೆ, ನಪುಂಸಕ ಪದ ಬಂತು...ಶಿಕ್ಷಕರು ಸೂಕ್ಷ್ಮತೆ ಕಳೆದುಕೊಂಡರೆ ಕಷ್ಟ ಎಂದ ಸಚಿವರು, ನಿಷ್ಠಾವಂತ ಶಿಕ್ಷಕರೂ ಇದ್ದಾರೆ ಎಂದರು.

ಸಿಇಒ, ಡಿಡಿಪಿಐ, ಬಿಇಒ, ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತಮ ಫಲಿತಾಂಶಕ್ಕೆ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪರೀಕ್ಷೆ ಮಕ್ಕಳಿಗೊ ಅಥವಾ ಇವರಿಗೊ ಎಂಬಂತಿದೆ, ಈ ಪ್ರಯತ್ನ ಮಕ್ಕಳು 8ನೇ ತರಗತಿಯಲ್ಲಿದ್ದಾಗಲೇ ಬರಬೇಕು. ಎಲ್ಲ ಶಾಲೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು, ತುಮಕೂರು ಜಿಲ್ಲೆಯಲ್ಲಿಯೂ ಅಂತಹ ಉತ್ತಮ ಕಾರ್ಯ ಮಾಡುವವರನ್ನು ಗುರುತಿಸಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕಿ ಡಾ.ಕೆ.ವಿ.ಅನಸೂಯಾ ಮಾತನಾಡಿ, ಆಧ್ಯಯನ, ಅಧ್ಯಾಪನ ಹಾಗೂ ಮೌಲ್ಯಮಾಪನ ಶಿಕ್ಷಕರ ಮೂಲ ಕೆಲಸ, ಇದಕ್ಕೆ ಬದಲಿ ಕೆಲಸ ಮಾಡುವವರು ಇಲ್ಲ, ಶಿಕ್ಷಕರ ಮೂಲ ಕೆಲಸದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾದರೂ ಸಾಕಷ್ಟು ದುಷ್ಪರಿಣಾಮ ಉಂಟಾಗಲಿದೆ, ಇದರ ಎಚ್ಚರಿಕೆ ಎಲ್ಲರಿಗೂ ಇರಬೇಕು ಎಂದರು. ತರಬೇತಿ ಪಡೆದಾಕ್ಷಣ ಶಿಕ್ಷಕರಾಗಲು ಸಾಧ್ಯವಿಲ್ಲ, ಕಲಿಕೆಯ ಪ್ರಕ್ರಿಯೆಯಲ್ಲಿ ಬದಲಾವಣೆ ತಂದರಷ್ಟೇ ಶಿಕ್ಷಕರೆನ್ನಿಸಿಕೊಳ್ಳುತ್ತಾರೆ, ಶಿಷ್ಯನಿಗೆ ಗುರು ಗುರುವಾದರೆ ಶಿಕ್ಷಕನಿಗೆ ಅಧ್ಯಯನ ಗುರುವಾಗಲಿದೆ, ಅಧ್ಯಯನ ವಿಲ್ಲದವರು ಶಿಕ್ಷಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಲೇಜಿನಲ್ಲಿ ಭಾಷಾ ಕಲಿಕೆ ಕಷ್ಟವಾಗಲಿದೆ, ಪ್ರಾಥಮಿಕ ಶಾಲೆಯಲ್ಲಿಯೇ ಮಕ್ಕಳಿಗೆ ಕಲಿಕೆ ಧನಾತ್ಮಕವಾಗಬೇಕು, ಭಾಷೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು, ಭಾಷೆಯ ಕಲಿಕೆಯಲ್ಲಿ ಅಸಡ್ಡೆಗೆ ಪ್ರಚೋದನೆ ಜಾಸ್ತಿಯಿದೆ, ಭಾಷೆಯ ಕಲಿಕೆಯಲ್ಲಿ ಹಿಂದುಳಿದವರ ಆಲೋಚನೆಗಳು ಉದಾತ್ಥವಾಗಿರಲು ಸಾಧ್ಯವಿಲ್ಲ ಎಂದರು.

ಸಂಜೆ ಆಶ್ರಮದ ಶಾರದಾ ಮಾಧುರ್ಯ ಸಂಗೀತ ವೇದಿಕೆಯ ಅಡಿಯಲ್ಲಿ ವಿಶೇಷ ವಿಶ್ವ ಸಂಗೀತ ಕಾರ್ಯಕ್ರಮ ಸುಸ್ವರ ಸಮೈಕ್ಯ ನಡೆಯಿತು. ಸ್ವಾಮಿ ಮಂಗಳನಾಥಾನಂದಜೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಸಿ.ರಂಗಧಾಮಪ್ಪ ಇದ್ದರು.

ತುಮಕೂರು ಸಂಬಂಧ ನೆನೆದ ಸಚಿವ: ತುಮಕೂರು ಮತ್ತು ನನಗೆ ಉತ್ತಮ ಬಾಂಧವ್ಯ ಇದೆ ಎಂದು ಸಚಿವ ಎಸ್.ಸುರೇಶ್‌ಕುಮಾರ್ ನಗರದೊಂದಿಗೆ ಇರುವ ಸಂಬಂಧ ನೆನಪಿಸಿಕೊಂಡರು. ಈ ಹಿಂದೆ ಮೂರು ವರ್ಷ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಲಿಂ.ಡಾ.ಶಿವಕುಮಾರ ಶ್ರೀಗಳ 101ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಶಿಕ್ಷಣ ಸಚಿವನಾದ ಬಳಿಕ ಪಾವಗಡ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದನ್ನು ನೆನಪಿಸಿಕೊಂಡರು.

ಸಮಾಜದ ಎಲ್ಲ ಶಾಲೆಗಳು ನಮ್ಮದೆ, ನಾವು ಶಾಲೆ ಕಟ್ಟಿದರೆ ನಮ್ಮದು, ಪಕ್ಕದ ಮನೆಯವರು ಕಟ್ಟಿದರೆ ಅವರದು. ಯಾವ ಶಾಲೆಗೆ ಹೋದರೂ ಶಿಕ್ಷಕರು ಆಹ್ವಾನಿಸುತ್ತಾರೆ. ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಆಶ್ರಮ ಅನ್ಯೋನ್ಯ ಬಾಂಧವ್ಯ ಕಲ್ಪಿಸಿಕೊಂಡಿದೆ. ಶಿಕ್ಷಕರು ವೃತ್ತಿ ಬಗ್ಗೆ ಉತ್ಸಾಹ ಕಳೆದುಕೊಳ್ಳಬಾರದು. ಸ್ವಾಮಿ ವೀರೇಶಾನಂದ ಸರಸ್ವತೀ ರಾಮಕೃಷ್ಣ ಆಶ್ರಮ

ಮಹಿಳಾ ಕಾಲೇಜಿಗೆ ಸ್ಥಳ ನೀಡಲು ಒಪ್ಪಿಗೆ: 1600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿರುವ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿವೇಶನ ನೀಡಲು ಸಚಿವ ಎಸ್.ಸುರೇಶ್‌ಕುಮಾರ್ ಒಪ್ಪಿಗೆ ಸೂಚಿಸಿದರು.

ಮುರುಕು ಕಟ್ಟಡದಲ್ಲಿ ನಡೆಯುತ್ತಿರುವ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಶನಿವಾರ ಭೇಟಿ ನೀಡಿದ್ದ ಸಚಿವರು, ಕಾಲೇಜು ಕಟ್ಟಡ ನಿರ್ಮಾಣಕ್ಕೆ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಾಲೇಜು ನಿರ್ಮಾಣಕ್ಕೆ ಅನುದಾನ ಲಭ್ಯವಿದೆ. ಕಾಲೇಜಿನ ವಾತಾವರಣವನ್ನು ಕಣ್ಣಾರೆ ಕಂಡಿದ್ದೇನೆ, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಜಾಗದ ತೊಡಕು ನಿವಾರಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಜ್ಯೋತಿಗಣೇಶ್, ಡಿಡಿಪಿಯು ಲಲಿತಾಕುಮಾರಿ, ಡಿಡಿಪಿಐ ಕಾಮಾಕ್ಷಿ ಮತ್ತಿತರರು ಇದ್ದರು.

1600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿರುವ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿವೇಶನ ನೀಡಲು ಸಚಿವ ಎಸ್.ಸುರೇಶ್‌ಕುಮಾರ್ ಒಪ್ಪಿಗೆ ಸೂಚಿಸಿದರು. ಮುರುಕು ಕಟ್ಟಡದಲ್ಲಿ ನಡೆಯುತ್ತಿರುವ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಶನಿವಾರ ಭೇಟಿ ನೀಡಿದ್ದ ಸಚಿವರು, ಕಾಲೇಜು ಕಟ್ಟಡ ನಿರ್ಮಾಣಕ್ಕೆ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಾಲೇಜು ನಿರ್ಮಾಣಕ್ಕೆ ಅನುದಾನ ಲಭ್ಯವಿದೆ. ಕಾಲೇಜಿನ ವಾತಾವರಣವನ್ನು ಕಣ್ಣಾರೆ ಕಂಡಿದ್ದೇನೆ, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಜಾಗದ ತೊಡಕು ನಿವಾರಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಜ್ಯೋತಿಗಣೇಶ್, ಡಿಡಿಪಿಯು ಲಲಿತಾಕುಮಾರಿ, ಡಿಡಿಪಿಐ ಕಾಮಾಕ್ಷಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net