ಮೈಸೂರು: ರಾಜ್ಯದ 9 ವಿಶ್ವವಿದ್ಯಾಲಯಗಳನ್ನೂ ಮುಚ್ಚುವ ಸರ್ಕಾರದ ತೀರ್ಮಾನವನ್ನು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಖಂಡಿಸಿದ್ದಾರೆ.
ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದು ದುರ್ದೈವದ ಸಂಗತಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೈಸೂರು ವಿಭಾಗದ ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಇದು ಆಯಾ ಜಿಲ್ಲೆಗಳ ಜನರಿಗೆ ಮಾಡಿದ ಅನ್ಯಾಯವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳಿಗೆ ಪ್ರತಿ ವರ್ಷ 50 ಸಾವಿರ ಕೋಟಿ ರೂ. ನೀಡುತ್ತಿದೆ. ಅದರಲ್ಲಿ ಶೇ.10 ರಷ್ಟು ಅಂದರೆ 5 ಸಾವಿರ ಕೋಟಿ ರೂ. ಅನ್ನು ವಿಶ್ವವಿದ್ಯಾಲಯಗಳಿಗೆ ನೀಡಿದರೆ ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಬಲಿಷ್ಠಗೊಳಿಸುವ ಕಾಳಜಿ ಮತ್ತು ಇಚ್ಛಾಶಕ್ತಿ ಇಟ್ಟುಕೊಳ್ಳಬೇಕು. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದರಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ 15-20 ವರ್ಷಗಳಿಂದ ರಾಜ್ಯ ಸರ್ಕಾರಗಳು ವಿಶ್ವವಿದ್ಯಾಲಯಗಳಿಗೆ ಯಾವುದೇ ರೀತಿಯ ಅನುದಾನಗಳನ್ನು ನೀಡಿರುವುದನ್ನೂ ಕಡಿತ ಮಾಡಿಕೊಂಡು ಬಂದು ಈಗಿನ ಸರ್ಕಾರ ಸಂಪೂರ್ಣ ನಿಲ್ಲಿಸಿದೆ. ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ, ಮರು ಎಣಿಕೆ ಅಥವಾ ಮರುಮೌಲ್ಯಮಾಪನ ಶುಲ್ಕಗಳಲ್ಲಿ ಮತ್ತು ಆಂತರಿಕ ಹಣಕಾಸು ಉತ್ಪಾದನೆಯ ಮೂಲಕ ಇಂದು ವಿಶ್ವವಿದ್ಯಾಲಯಗಳು ನಡೆಯುತ್ತಿರುವುದು ಅವಮಾನದ ಸಂಗತಿಯಾಗಿದೆ. ಹಾಗಾಗಿ ಬಜೆಟ್‌ನಲ್ಲಿ ಖಾಲಿ ಹುದ್ದೆ ಭರ್ತಿ, ವಿವಿಗಳಿಗೆ ಕನಿಷ್ಠ 10 ಸಾವಿರ ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ.